ದೇಶ
ನಾಳೆ ದೇಶದಲ್ಲಿ ಯುದ್ಧದ ಡ್ರಿಲ್! – ಮಾಕ್ ಡ್ರಿಲ್ ಹೇಗಿರಲಿದೆ?
ನವದೆಹಲಿ: ಬರೋಬ್ಬರಿ 54 ವರ್ಷದ ಬಳಿಕ ಭಾರತದಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಪಹಲ್ಗಾಮ್ ಪ್ರತೀಕಾರಕ್ಕೆ (Pahalgam Terror Attack) ಭಾರತ (India) ಸನ್ನದ್ಧವಾಗುತ್ತಿದ್ದಂತೆ ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ (Civil Defence District) ನಾಳೆ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ.
ಯುದ್ಧದ (War) ದಾಳಿ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಣಕು ತಾಲೀಮಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರ ರಕ್ಷಣೆಗಾಗಿ ಪ್ರಾತ್ಯಕ್ಷಿಕೆ ಕೊಡುವಂತೆ ಸಿವಿಲ್ ಡಿಫೆನ್ಸ್‌ಗಳಿಗೆ ಸೂಚನೆ ನೀಡಲಾಗಿದೆ.
ಸಾಧಾರಣವಾಗಿ ಒಂದು ದೇಶ ಯುದ್ಧಕ್ಕೆ ಸಿದ್ಧಗೊಳ್ಳುತ್ತಿದ್ದಾಗ ಮಾಕ್ ಡ್ರಿಲ್ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಕಳೆದ ಭಾನುವಾರ ಪಂಜಾಬ್‌ನ ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ರಾತ್ರಿ 9 ರಿಂದ 9:30ರವರೆಗೆ ವಿದ್ಯುತ್ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
1971ರ ಸಂದರ್ಭದಲ್ಲೂ ಮೊದಲಿಗೆ ಪಂಜಾಬ್‌ನಲ್ಲೇ ಮೊದಲ ಬಾರಿ ಮಾಕ್ ಡ್ರಿಲ್ ಮಾಡಲಾಗಿತ್ತು. ಈ ಬಾರಿಯೂ ಮೊದಲು ಪಂಜಾಬ್ ನಲ್ಲಿ ನಡೆಸಿ ಬಳಿಕ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿರುವುದು ವಿಶೇಷ. ಹೀಗಾಗಿ 1971 ರೀತಿ ಮತ್ತೊಮ್ಮೆ ಭಾರತ ಪಾಕ್ ಮಧ್ಯೆ ಯುದ್ಧ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ.
ಮಾಕ್ ಡ್ರಿಲ್ ಎಂದರೇನು?
ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.
ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ.
ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆ ಈ ರೀತಿಯ ಮಾಕ್ ಡ್ರಿಲ್ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್ ಡ್ರಿಲ್ ಮಾಡಲು ಸಮಯ ಸಿಕ್ಕಿರಲಿಲ್ಲ.
ದೇಶ
SIR ಎಂದರೇನು? ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಪೂರ್ಣ ಮಾಹಿತಿ
ಬೆಂಗಳೂರು: ಕರ್ನಾಟಕದಲ್ಲಿ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ (ECI) ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ನಡೆಸುತ್ತಿದೆ.
ಈ ಪ್ರಕ್ರಿಯೆಯ ಪ್ರಮುಖ ಉದ್ದೇಶ ಸತ್ತವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿದೆ. ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರು ನೋಂದಾಯಿತರಾಗಿದ್ದು, ಅವರಲ್ಲಿ ಸುಮಾರು 91.61% ಮತದಾರರ ವಿವರಗಳು ಈಗಾಗಲೇ ಮ್ಯಾಪ್ ಆಗಿವೆ. ಉಳಿದ ಮತದಾರರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸಾವಿರಾರು ಅಧಿಕಾರಿಗಳು ಹಾಗೂ 5,950 BLOಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರಿಗೆ ಅಗತ್ಯ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಸೇವಾ ಸಿಂಧು, ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯುವ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಿದೆ.
ಇದೀಗ SIR ಪ್ರಕ್ರಿಯೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಕೆಲವು ರಾಜಕೀಯ ಪಕ್ಷಗಳು ಮನೆ-ಮನೆ ಪರಿಶೀಲನೆಯ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ವಿತರಣೆ, ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡಿವೆ. ಆದರೆ, ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಇನ್ನೂ ಮ್ಯಾಪ್ ಆಗದ ಮತದಾರರ ಹೆಸರುಗಳು ತಕ್ಷಣವೇ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕ ದಾಖಲೆ ಸಲ್ಲಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ನಿಖರವಾಗಿಡುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ದೇಶ
ಅಲಿ ಖಮೇನಿ ಅಂತ್ಯಕ್ರಿಯೆ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ: “ಅದು ಮೊಸಳೆ ಕಣ್ಣೀರು
ವಾಷಿಂಗ್ಟನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ (Ali Khamenei) ಅವರ ಅಂತ್ಯಕ್ರಿಯೆ ವೇಳೆ ಸಾವಿರಾರು ಜನರು ಕಂಬನಿ ಮಿಡಿದ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಂತ್ಯಕ್ರಿಯೆಯಲ್ಲಿ ಜನರು ಅಳುತ್ತಿರುವುದು ನಿಜವಾದ ದುಃಖವಲ್ಲ, ಅದು “ಮೊಸಳೆ ಕಣ್ಣೀರು” ಎಂದು ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಇರಾನ್‌ನ ಪ್ರಮುಖ ರಾಜಕೀಯ ನಾಯಕರು, ಸಂಸದರು ಹಾಗೂ ಸಾವಿರಾರು ನಾಗರಿಕರು ಭಾಗವಹಿಸಿದ್ದರು. ಈ ದೃಶ್ಯಗಳನ್ನು ಉಲ್ಲೇಖಿಸಿದ ಟ್ರಂಪ್, “ಇರಾನ್‌ನ ಜನರು ಖಮೇನಿಯನ್ನು ದ್ವೇಷಿಸುತ್ತಿದ್ದರು. ಈಗ ಅವರು ಅಳುತ್ತಿರುವುದು ನಂಬಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದೇ ವೇಳೆ, ಇರಾನ್‌ನ ಉಳಿದಿರುವ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಮರ್ಥ್ಯ ಅಮೆರಿಕಕ್ಕೆ ಇದೆ. ಆದರೆ, ಮಾತುಕತೆ ಮುಂದುವರಿಸಲು ನಾಯಕತ್ವ ಉಳಿಯಬೇಕು ಎಂಬ ಕಾರಣಕ್ಕೆ ಅಂತಹ ನಿರ್ಧಾರ ಕೈಗೊಂಡಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಇರಾನ್ ಪರದಿಂದ ಒಪ್ಪಂದಕ್ಕೆ ಆಸಕ್ತಿ ವ್ಯಕ್ತವಾಗಿದ್ದು, ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ಅವರು ಹೇಳಿದ್ದಾರೆ.
ಖಮೇನಿ ಅವರ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಅಮೆರಿಕ ಹಾಗೂ ಇರಾನ್ ನಡುವೆ ನಡೆಯಬೇಕಿದ್ದ ಮಾತುಕತೆಗೆ ಒಂದು ವಾರ ವಿರಾಮ ನೀಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಕಡೆಯಿಂದಲೂ ದಾಳಿ ನಡೆಯುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
36 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ನಾಯಕತ್ವ ವಹಿಸಿದ್ದ ಅಲಿ ಖಮೇನಿ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಯುದ್ಧದ ಪರಿಸ್ಥಿತಿಯಿಂದಾಗಿ ಅವರ ಅಂತ್ಯಕ್ರಿಯೆ ತಡವಾಗಿ ನಡೆಯುತ್ತಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ದೇಶ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅವ್ಯವಸ್ಥೆ? ಬಿಎಲ್‌ಒಗಳ ಮೇಲೆ ಒತ್ತಡ ಆರೋಪಿಸಿದ ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಸ್ಥೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೂತ್ ಮಟ್ಟದ ಅಧಿಕಾರಿಗಳ (BLO) ಮೇಲೆ ಒತ್ತಡ ಹೇರುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಬದಲು ಕಲ್ಯಾಣ ಮಂಟಪ, ಚೌಲ್ಟ್ರಿ ಹಾಗೂ ಮಸೀದಿಗಳಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ದೂರಿದರು. ಕೆಲವು ಶಾಸಕರ ಕಚೇರಿಗಳಲ್ಲೇ ಬಿಎಲ್‌ಒಗಳನ್ನು ಕೂರಿಸಿ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ, ಈ ಕುರಿತು ಸಾಕ್ಷ್ಯ ಸಮೇತ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಿತರಿಸಲಾಗುತ್ತಿರುವ ಅರ್ಜಿಗಳ ಮೇಲೆ ಕಾಂಗ್ರೆಸ್ ಮುಖಂಡರ ಫೋಟೋಗಳು ಮುದ್ರಣಗೊಂಡಿರುವ ವಿಚಾರವನ್ನೂ ಚುನಾವಣಾ ಆಯೋಗದ ಗಮನಕ್ಕೆ ತಂದಿರುವುದಾಗಿ ವಿಜಯೇಂದ್ರ ಹೇಳಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿರುವ ಎಲ್ಲೆಡೆ ಮರುಪರಿಷ್ಕರಣೆ ನಡೆಸುವಂತೆ ಆಗ್ರಹಿಸಿದರು.
ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಮನೆಗಳ ಸಂಖ್ಯೆ ಹೆಚ್ಚಳವಾಗದೆ ಮತದಾರರ ಸಂಖ್ಯೆ ಮಾತ್ರ ಹೆಚ್ಚಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು. ಅಕ್ರಮ ಮತದಾರರನ್ನು ತಡೆಯಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವುದು ಅಗತ್ಯ ಎಂದು ಒತ್ತಾಯಿಸಿದರು.
ಇದೇ ವೇಳೆ, ಬರ ಪರಿಸ್ಥಿತಿಯಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ನಡೆಸುವುದು ಸೂಕ್ತ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
