ದೇಶ
ಮುಂದೆ ಸ್ನೇಹದ ಹಸ್ತ, ಹಿಂದೆ ಬೆನ್ನಿಗೆ ಚೂರಿ! ಈ ಕಾರಣಕ್ಕೆ ಭಾರತ ಅಂದ್ರೆ ಉರಿದು ಬೀಳ್ತಿರೋ ಟ್ರಂಪ್!
ಡೊನಾಲ್ಡ್ ಟ್ರಂಪ್ (Donald Trump) ಅಂದ್ರೆನೆ ವಿವಾದಗಳ ಸರದಾರ. ಅವರ ಮಾತುಗಳು, ಅವರ ನೀತಿಗಳು ಜಗತ್ತಿನ ಬಹಳಷ್ಟು ದೇಶಗಳಿಗೆ ತಲೆನೋವು ತಂದಿದೆ. ಅದರಲ್ಲೂ ಭಾರತದ (India) ಜೊತೆಗಿನ ಅವರ ಸಂಬಂಧ ಸ್ವಲ್ಪ ವಿಚಿತ್ರವಾಗಿದೆ. ಕೆಲವೊಮ್ಮೆ ಸ್ನೇಹದ ಹಸ್ತ ಚಾಚಿದ್ರೆ, ಇನ್ನೊಂದ್ಸಲ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಉರಿ ಉರಿ ಅನ್ನೋ ಹಾಗೆ ಮಾಡ್ತಾರೆ. ಭಾರತ-ಪಾಕ್ ನಡುವೆ ಬಂದು ನಾನೇ ಕದನ ವಿರಾಮ (Ceasefire) ಮಾಡಿಸಿದ್ದು ಅಂತ ಮೊದಲು ಹೇಳಿದ್ದರು. ಆದ್ರೆ ಇದ್ದಕ್ಕಿದ್ದ ಹಾಗೇ ಯೂಟರ್ನ್ ಹೊಡೆದುಬಿಟ್ರು. ನಾನು ಕದನ ವಿರಾಮ ಮಾಡಿಸಿಲ್ಲ ಅಂತ ಹೇಳಿದ್ರು. ಇದೆಲ್ಲ ನೋಡ್ತಿದ್ರೆ ಟ್ರಂಪ್ ಯಾಕೋ ಭಾರತಕ್ಕೆ ಪರೋಕ್ಷವಾಗಿ ಬೆನ್ನಿಗೆ ಚೂರಿ ಹಾಕ್ತಿದ್ದಾರೆ ಅನ್ನೋ ಪ್ರಶ್ನೆಗಳು ಎದ್ದಿವೆ.
ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿದ್ದಾಗ ಭಾರತ ಮತ್ತೆ ಅಮೆರಿಕಾ ನಡುವಿನ ವ್ಯಾಪಾರ ಸಂಬಂಧದಲ್ಲಿ ಬಹಳಷ್ಟು ಏರಿಳಿತಗಳು ಆಗಿದ್ದವು. ಟ್ರಂಪ್ ಅವರು ಭಾರತದ ವ್ಯಾಪಾರ ನೀತಿಗಳ ಬಗ್ಗೆ ಪದೇ ಪದೇ ಟೀಕೆ ಮಾಡ್ತಿದ್ರು. ಭಾರತ ಅಮೆರಿಕಾದ ವಸ್ತುಗಳ ಮೇಲೆ ಹೆಚ್ಚು ಸುಂಕ (ಟ್ಯಾರಿಫ್) ವಿಧಿಸುತ್ತೆ ಅಂತ ಅವರ ಆರೋಪ. ಆದ್ರೆ ಭಾರತ ಮಾತ್ರ ಇದಕ್ಕೆ ತಲೆಬಾಗಲಿಲ್ಲ. ಅಮೆರಿಕಾ ಹೇಳಿದ ಹಾಗೆಲ್ಲಾ ಒಪ್ಪಿಕೊಳ್ಳಲಿಲ್ಲ.
ಆದ್ರೆ ಚೀನಾ ಮಾತ್ರ ಅಮೆರಿಕಾ ಹೇಳಿದ ಹಾಗೆಲ್ಲಾ ಒಪ್ಪಿಕೊಂಡಿತ್ತು. ಟ್ರಂಪ್ ಒತ್ತಡಕ್ಕೆ ಮಣಿದು ಚೀನಾ ತನ್ನ ವ್ಯಾಪಾರ ನೀತಿಗಳಲ್ಲಿ ಬದಲಾವಣೆ ತಂದಿತ್ತು. ಆದ್ರೆ ಭಾರತ ಮಾತ್ರ ತನ್ನ ನಿಲುವಿಗೆ ಬದ್ಧವಾಗಿತ್ತು. ಇದು ಟ್ರಂಪ್‌ಗೆ ಸ್ವಲ್ಪ ಬೇಸರ ತರಿಸಿತ್ತು. ಅದಕ್ಕೆ ಅವರು ಪರೋಕ್ಷವಾಗಿ ಭಾರತಕ್ಕೆ ಟಾಂಗ್ ಕೊಡೋಕೆ ಶುರು ಮಾಡಿದ್ರು.
ಟ್ರಂಪ್ ಪ್ರಕಾರ, ಭಾರತ ಅಮೆರಿಕಾದ ವಸ್ತುಗಳ ಮೇಲೆ ವಿಧಿಸುವ ಸುಂಕ ತುಂಬಾನೇ ಜಾಸ್ತಿ. ಇದರಿಂದ ಅಮೆರಿಕಾದ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡೋಕೆ ಕಷ್ಟವಾಗುತ್ತೆ ಅಂತ ಅವರು ಹೇಳ್ತಿದ್ರು. ಅಷ್ಟೇ ಅಲ್ಲ, ಭಾರತ ಅಮೆರಿಕಾದಿಂದ ಆಮದು ಮಾಡಿಕೊಳ್ಳೋ ವಸ್ತುಗಳ ಮೇಲೆ ಹೆಚ್ಚು ಸುಂಕ ವಿಧಿಸಿ, ಅಮೆರಿಕಾದ ಮಾರುಕಟ್ಟೆಗೆ ಭಾರತದ ವಸ್ತುಗಳು ಸುಲಭವಾಗಿ ಬರೋ ಹಾಗೆ ಮಾಡ್ತಿದೆ ಅಂತ ಅವರು ಆರೋಪಿಸಿದ್ರು.
ವ್ಯಾಪಾರದ ಬಗ್ಗೆ ಕಿರಿಕ್!
ಟ್ರಂಪ್ ಅವರಿಗೆ ಭಾರತದ ವ್ಯಾಪಾರ ನೀತಿಗಳು ಇಷ್ಟವಾಗಲ್ಲ. ಯಾಕಂದ್ರೆ ಅವರ ಪ್ರಕಾರ ಭಾರತ ಅಮೆರಿಕಾದ ವಸ್ತುಗಳ ಮೇಲೆ ಬಹಳಷ್ಟು ಸುಂಕ ವಿಧಿಸುತ್ತೆ. ಅಮೆರಿಕಾ-ಭಾರತದ ನಡುವಿನ ವ್ಯಾಪಾರದಲ್ಲಿ ಅಸಮತೋಲನ ಇದೆ ಅಂತ ಅವರು ಪದೇ ಪದೇ ಹೇಳ್ತಾರೆ.
ಅವರ ಆಡಳಿತದ ಟೈಮಲ್ಲಿ ಭಾರತದಿಂದ ಅಮೆರಿಕಾಗೆ ಹೋಗೋ ಕೆಲವು ವಸ್ತುಗಳ ಮೇಲೆ ಸಿಗ್ತಿದ್ದ ವ್ಯಾಪಾರ ಸೌಲಭ್ಯಗಳನ್ನ ರದ್ದು ಮಾಡಿದ್ರು. ಇದರಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧದಲ್ಲಿ ಸ್ವಲ್ಪ ಬಿರುಕು ಬಿತ್ತು.
ಭಾರತ ಮತ್ತೆ ಪಾಕಿಸ್ತಾನದ ನಡುವೆ ಕಾಶ್ಮೀರ ವಿವಾದದ ಬಗ್ಗೆ ಟ್ರಂಪ್ ಕೊಡುವ ಹೇಳಿಕೆಗಳು ಭಾರತದಲ್ಲಿ ಬಹಳಷ್ಟು ವಿವಾದ ಸೃಷ್ಟಿಸಿವೆ. ಅದರಲ್ಲೂ ಅವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸೋಕೆ ಬಂದಾಗ ಭಾರತಕ್ಕೆ ಉರಿ ಉರಿ ಅನ್ನೋ ಹಾಗಾಯಿತು. ಯಾಕಂದ್ರೆ ಕಾಶ್ಮೀರ ಭಾರತ ಮತ್ತೆ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯ, ಇದರಲ್ಲಿ ಮೂರನೇ ವ್ಯಕ್ತಿ ತಲೆ ಹಾಕೋದು ಭಾರತಕ್ಕೆ ಇಷ್ಟವಿಲ್ಲ.
ಇತ್ತೀಚೆಗೆ ಟ್ರಂಪ್ ಭಾರತದ ವ್ಯಾಪಾರ ನೀತಿಗಳ ಬಗ್ಗೆ ಮತ್ತೆ ಮಾತಾಡಿದ್ದಾರೆ. ಭಾರತದ ಸುಂಕಗಳು ಮತ್ತೆ ಆಪಲ್ ಕಂಪನಿ ಭಾರತದಲ್ಲಿ ಉತ್ಪಾದನೆ ಮಾಡ್ತಿರೋದರ ಬಗ್ಗೆ ಅವರ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಈ ಮಾತುಗಳು ಭಾರತದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿವೆ. ಇವೆಲ್ಲಾ ಕಾರಣಗಳಿಂದ ಭಾರತದ ಕೆಲವರಿಗೆ ಟ್ರಂಪ್ ಬಗ್ಗೆ ಅಸಮಾಧಾನ ಇದೆ. ಆದ್ರೆ ಟ್ರಂಪ್ ಅವರ ಮಾತುಗಳು ಕೆಲವೊಮ್ಮೆ ರಾಜಕೀಯ ಲಾಭಕ್ಕೋಸ್ಕರ ಇರುತ್ತೆ. ಆದ್ರೆ ಭಾರತದ ಜೊತೆಗಿನ ಸಂಬಂಧ ಅವರಿಗೆ ಮುಖ್ಯ ಅನ್ನೋದು ಕೂಡಾ ನಿಜ.
ಹಾಗಾಗಿ ಟ್ರಂಪ್ ಅವರ ಮಾತುಗಳನ್ನ ಬಹಳಷ್ಟು ಜನ ಗಂಭೀರವಾಗಿ ತಗೊಳಲ್ಲ. ಯಾಕಂದ್ರೆ ಅವರ ಮಾತುಗಳು ಯಾವಾಗ ಬೇಕಾದ್ರೂ ಬದಲಾಗಬಹುದು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಭಾರತದ ಜೊತೆಗಿನ ಅವರ ವ್ಯಾಪಾರ ಸಂಬಂಧಗಳು ಮಾತ್ರ ಯಾವಾಗ್ಲೂ ಚರ್ಚೆಗೆ ಗ್ರಾಸವಾಗ್ತಾನೆ ಇರುತ್ತೆ.
ದೇಶ
SIR ಎಂದರೇನು? ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಪೂರ್ಣ ಮಾಹಿತಿ
ಬೆಂಗಳೂರು: ಕರ್ನಾಟಕದಲ್ಲಿ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ (ECI) ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ನಡೆಸುತ್ತಿದೆ.
ಈ ಪ್ರಕ್ರಿಯೆಯ ಪ್ರಮುಖ ಉದ್ದೇಶ ಸತ್ತವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿದೆ. ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರು ನೋಂದಾಯಿತರಾಗಿದ್ದು, ಅವರಲ್ಲಿ ಸುಮಾರು 91.61% ಮತದಾರರ ವಿವರಗಳು ಈಗಾಗಲೇ ಮ್ಯಾಪ್ ಆಗಿವೆ. ಉಳಿದ ಮತದಾರರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸಾವಿರಾರು ಅಧಿಕಾರಿಗಳು ಹಾಗೂ 5,950 BLOಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರಿಗೆ ಅಗತ್ಯ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಸೇವಾ ಸಿಂಧು, ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯುವ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಿದೆ.
ಇದೀಗ SIR ಪ್ರಕ್ರಿಯೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಕೆಲವು ರಾಜಕೀಯ ಪಕ್ಷಗಳು ಮನೆ-ಮನೆ ಪರಿಶೀಲನೆಯ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ವಿತರಣೆ, ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡಿವೆ. ಆದರೆ, ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಇನ್ನೂ ಮ್ಯಾಪ್ ಆಗದ ಮತದಾರರ ಹೆಸರುಗಳು ತಕ್ಷಣವೇ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕ ದಾಖಲೆ ಸಲ್ಲಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ನಿಖರವಾಗಿಡುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ದೇಶ
ಅಲಿ ಖಮೇನಿ ಅಂತ್ಯಕ್ರಿಯೆ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ: “ಅದು ಮೊಸಳೆ ಕಣ್ಣೀರು
ವಾಷಿಂಗ್ಟನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ (Ali Khamenei) ಅವರ ಅಂತ್ಯಕ್ರಿಯೆ ವೇಳೆ ಸಾವಿರಾರು ಜನರು ಕಂಬನಿ ಮಿಡಿದ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಂತ್ಯಕ್ರಿಯೆಯಲ್ಲಿ ಜನರು ಅಳುತ್ತಿರುವುದು ನಿಜವಾದ ದುಃಖವಲ್ಲ, ಅದು “ಮೊಸಳೆ ಕಣ್ಣೀರು” ಎಂದು ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಇರಾನ್‌ನ ಪ್ರಮುಖ ರಾಜಕೀಯ ನಾಯಕರು, ಸಂಸದರು ಹಾಗೂ ಸಾವಿರಾರು ನಾಗರಿಕರು ಭಾಗವಹಿಸಿದ್ದರು. ಈ ದೃಶ್ಯಗಳನ್ನು ಉಲ್ಲೇಖಿಸಿದ ಟ್ರಂಪ್, “ಇರಾನ್‌ನ ಜನರು ಖಮೇನಿಯನ್ನು ದ್ವೇಷಿಸುತ್ತಿದ್ದರು. ಈಗ ಅವರು ಅಳುತ್ತಿರುವುದು ನಂಬಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದೇ ವೇಳೆ, ಇರಾನ್‌ನ ಉಳಿದಿರುವ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಮರ್ಥ್ಯ ಅಮೆರಿಕಕ್ಕೆ ಇದೆ. ಆದರೆ, ಮಾತುಕತೆ ಮುಂದುವರಿಸಲು ನಾಯಕತ್ವ ಉಳಿಯಬೇಕು ಎಂಬ ಕಾರಣಕ್ಕೆ ಅಂತಹ ನಿರ್ಧಾರ ಕೈಗೊಂಡಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಇರಾನ್ ಪರದಿಂದ ಒಪ್ಪಂದಕ್ಕೆ ಆಸಕ್ತಿ ವ್ಯಕ್ತವಾಗಿದ್ದು, ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ಅವರು ಹೇಳಿದ್ದಾರೆ.
ಖಮೇನಿ ಅವರ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಅಮೆರಿಕ ಹಾಗೂ ಇರಾನ್ ನಡುವೆ ನಡೆಯಬೇಕಿದ್ದ ಮಾತುಕತೆಗೆ ಒಂದು ವಾರ ವಿರಾಮ ನೀಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಕಡೆಯಿಂದಲೂ ದಾಳಿ ನಡೆಯುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
36 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ನಾಯಕತ್ವ ವಹಿಸಿದ್ದ ಅಲಿ ಖಮೇನಿ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಯುದ್ಧದ ಪರಿಸ್ಥಿತಿಯಿಂದಾಗಿ ಅವರ ಅಂತ್ಯಕ್ರಿಯೆ ತಡವಾಗಿ ನಡೆಯುತ್ತಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ದೇಶ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅವ್ಯವಸ್ಥೆ? ಬಿಎಲ್‌ಒಗಳ ಮೇಲೆ ಒತ್ತಡ ಆರೋಪಿಸಿದ ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಸ್ಥೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೂತ್ ಮಟ್ಟದ ಅಧಿಕಾರಿಗಳ (BLO) ಮೇಲೆ ಒತ್ತಡ ಹೇರುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಬದಲು ಕಲ್ಯಾಣ ಮಂಟಪ, ಚೌಲ್ಟ್ರಿ ಹಾಗೂ ಮಸೀದಿಗಳಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ದೂರಿದರು. ಕೆಲವು ಶಾಸಕರ ಕಚೇರಿಗಳಲ್ಲೇ ಬಿಎಲ್‌ಒಗಳನ್ನು ಕೂರಿಸಿ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ, ಈ ಕುರಿತು ಸಾಕ್ಷ್ಯ ಸಮೇತ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಿತರಿಸಲಾಗುತ್ತಿರುವ ಅರ್ಜಿಗಳ ಮೇಲೆ ಕಾಂಗ್ರೆಸ್ ಮುಖಂಡರ ಫೋಟೋಗಳು ಮುದ್ರಣಗೊಂಡಿರುವ ವಿಚಾರವನ್ನೂ ಚುನಾವಣಾ ಆಯೋಗದ ಗಮನಕ್ಕೆ ತಂದಿರುವುದಾಗಿ ವಿಜಯೇಂದ್ರ ಹೇಳಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿರುವ ಎಲ್ಲೆಡೆ ಮರುಪರಿಷ್ಕರಣೆ ನಡೆಸುವಂತೆ ಆಗ್ರಹಿಸಿದರು.
ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಮನೆಗಳ ಸಂಖ್ಯೆ ಹೆಚ್ಚಳವಾಗದೆ ಮತದಾರರ ಸಂಖ್ಯೆ ಮಾತ್ರ ಹೆಚ್ಚಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು. ಅಕ್ರಮ ಮತದಾರರನ್ನು ತಡೆಯಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವುದು ಅಗತ್ಯ ಎಂದು ಒತ್ತಾಯಿಸಿದರು.
ಇದೇ ವೇಳೆ, ಬರ ಪರಿಸ್ಥಿತಿಯಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ನಡೆಸುವುದು ಸೂಕ್ತ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
