ದೇಶ
ಶೇಷಾಚಲಂ ಬೆಟ್ಟಗಳ ಪವಿತ್ರ ತೀರ್ಥಗಳಿಗೆ ಭೇಟಿ ನೀಡಲು ಮಾರ್ಗಸೂಚಿ ಪ್ರಕಟ
ತಿರುಮಲ (ಆಂಧ್ರಪ್ರದೇಶ): ಪವಿತ್ರ ಶೇಷಾಚಲಂ ಬೆಟ್ಟಗಳಲ್ಲಿ ಇರುವ ಅನೇಕ ತೀರ್ಥ ಕ್ಷೇತ್ರಗಳು ಭಕ್ತರ ಆಕರ್ಷಣೆಯ ಕೇಂದ್ರವಾಗಿವೆ. ಹಿಂದಿನಿಂದಲೂ ಎಲ್ಲ ತೀರ್ಥಗಳಿಗೆ ಭಕ್ತರಿಗೆ ಸರ್ವಕಾಲ ಪ್ರವೇಶ ಇರಲಿಲ್ಲ. ಆದರೆ ಇದೀಗ ತಿರುಮಲ ತಿರುಪತಿ ದೇವಸ್ಥಾನ (TTD) ಭಕ್ತರ ಸುರಕ್ಷತೆ ಮತ್ತು ಅನುಕೂಲತೆ ದೃಷ್ಟಿಯಿಂದ ಈ ತೀರ್ಥ ಕ್ಷೇತ್ರಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದೆ.
ಆಕಾಶ ಗಂಗಾ ತೀರ್ಥ: ತಿರುಮಲದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ದೇವಾಲಯದ ಬಸ್ ಅಥವಾ ಖಾಸಗಿ ವಾಹನದ ಮೂಲಕ ತಲುಪಬಹುದು. ಶಿವನು ಇಲ್ಲಿ ಸ್ನಾನ ಮಾಡಿದ್ದಾನೆ ಎಂಬ ಪೌರಾಣಿಕ ನಂಬಿಕೆ ಇದೆ. ಈಗ ಈ ಸ್ಥಳ ಭಕ್ತರಿಗೆ ವರ್ಷಪೂರ್ತಿ ತೆರೆಯಲಾಗಿದೆ.
ಪಾಂಡವ ತೀರ್ಥ: ವೆಂಕಟೇಶ್ವರ ದೇಗುಲದ ಪೂರ್ವಕ್ಕೆ 2.5 ಕಿ.ಮೀ ದೂರದಲ್ಲಿರುವ ಈ ತೀರ್ಥವು ಮಹಾ ಶಿವರಾತ್ರಿಯಂದು ವಿಶೇಷ ಅಭಿಷೇಕಕ್ಕಾಗಿ ಪ್ರಸಿದ್ಧ. ಈಗ ಇದು ನಿಯಮಿತವಾಗಿ ಭಕ್ತರಿಗೆ ತೆರೆಯಲಿದೆ.
ಚಕ್ರತೀರ್ಥಂ: ಶೈಲತೋರಣಂ ಬಳಿ ಇರುವ ಈ ತೀರ್ಥಕ್ಕೂ ಬಸ್ ಅಥವಾ ಖಾಸಗಿ ವಾಹನದ ಮೂಲಕ ಸುಲಭ ಪ್ರವೇಶವಿದೆ. ಇದು ಕೂಡ ಈಗಿಂದೇ ವರ್ಷಪೂರ್ತಿ ಭಕ್ತರ ಭೇಟಿಗೆ ಮುಕ್ತವಾಗಿದೆ.
ಮುಂದಿನ ವರ್ಷಕ್ಕೆ ತೆರೆಯುವ ತೀರ್ಥಗಳು: ತುಂಬುರು ತೀರ್ಥ, ಕುಮಾರಧಾರ ತೀರ್ಥ ಮತ್ತು ಶ್ರೀರಾಮಕೃಷ್ಣ ತೀರ್ಥಗಳನ್ನು ಫಾಲ್ಗುಣ ಮತ್ತು ಮಾಘ ಹುಣ್ಣಿಮೆಯ ದಿನಗಳಲ್ಲಿ ಮಾತ್ರ ತೆರೆಯಲಾಗುತ್ತದೆ. ಈ ತೀರ್ಥಗಳಿಗೆ ಪಾದಯಾತ್ರೆಯ ಅಗತ್ಯವಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ಆರೋಗ್ಯ ಸಮಸ್ಯೆಯುಳ್ಳವರು ಈ ಸ್ಥಳಗಳಿಗೆ ಹೋಗದಂತೆ ಟಿಟಿಡಿ ಎಚ್ಚರಿಕೆ ನೀಡಿದೆ.
ಟಿಟಿಡಿ ಭಕ್ತರ ಸುರಕ್ಷತೆಗೆ ಕುಡಿಯುವ ನೀರು, ವೈದ್ಯಕೀಯ ಸಿಬ್ಬಂದಿ ಹಾಗೂ ತಾತ್ಕಾಲಿಕ ಏಣಿ ವ್ಯವಸ್ಥೆ ಮಾಡಿದೆ. ವಿಶೇಷ ದಿನಗಳಲ್ಲಿ ಪಾಪವಿನಾಶನಂ ವರೆಗೆ ಆರ್‌ಟಿಸಿ ಬಸ್‌ಗಳು ಮಾತ್ರ ಸಂಚರಿಸಲಿದ್ದು, ಖಾಸಗಿ ವಾಹನಗಳಿಗೆ ನಿರ್ಬಂಧ ಇದೆ.
ಈ ಹೊಸ ವ್ಯವಸ್ಥೆಯೊಂದಿಗೆ ತಿರುಮಲದ ಪವಿತ್ರ ತೀರ್ಥಗಳಿಗೆ ಭಕ್ತರ ಆಧ್ಯಾತ್ಮಿಕ ಅನುಭವ ಸುರಕ್ಷಿತವಾಗಿ ಸಾಧ್ಯವಾಗಲಿದೆ.
ದೇಶ
SIR ಎಂದರೇನು? ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಪೂರ್ಣ ಮಾಹಿತಿ
ಬೆಂಗಳೂರು: ಕರ್ನಾಟಕದಲ್ಲಿ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ (ECI) ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ನಡೆಸುತ್ತಿದೆ.
ಈ ಪ್ರಕ್ರಿಯೆಯ ಪ್ರಮುಖ ಉದ್ದೇಶ ಸತ್ತವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿದೆ. ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರು ನೋಂದಾಯಿತರಾಗಿದ್ದು, ಅವರಲ್ಲಿ ಸುಮಾರು 91.61% ಮತದಾರರ ವಿವರಗಳು ಈಗಾಗಲೇ ಮ್ಯಾಪ್ ಆಗಿವೆ. ಉಳಿದ ಮತದಾರರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸಾವಿರಾರು ಅಧಿಕಾರಿಗಳು ಹಾಗೂ 5,950 BLOಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರಿಗೆ ಅಗತ್ಯ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಸೇವಾ ಸಿಂಧು, ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯುವ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಿದೆ.
ಇದೀಗ SIR ಪ್ರಕ್ರಿಯೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಕೆಲವು ರಾಜಕೀಯ ಪಕ್ಷಗಳು ಮನೆ-ಮನೆ ಪರಿಶೀಲನೆಯ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ವಿತರಣೆ, ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡಿವೆ. ಆದರೆ, ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಇನ್ನೂ ಮ್ಯಾಪ್ ಆಗದ ಮತದಾರರ ಹೆಸರುಗಳು ತಕ್ಷಣವೇ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕ ದಾಖಲೆ ಸಲ್ಲಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ನಿಖರವಾಗಿಡುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ದೇಶ
ಅಲಿ ಖಮೇನಿ ಅಂತ್ಯಕ್ರಿಯೆ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ: “ಅದು ಮೊಸಳೆ ಕಣ್ಣೀರು
ವಾಷಿಂಗ್ಟನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ (Ali Khamenei) ಅವರ ಅಂತ್ಯಕ್ರಿಯೆ ವೇಳೆ ಸಾವಿರಾರು ಜನರು ಕಂಬನಿ ಮಿಡಿದ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಂತ್ಯಕ್ರಿಯೆಯಲ್ಲಿ ಜನರು ಅಳುತ್ತಿರುವುದು ನಿಜವಾದ ದುಃಖವಲ್ಲ, ಅದು “ಮೊಸಳೆ ಕಣ್ಣೀರು” ಎಂದು ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಇರಾನ್‌ನ ಪ್ರಮುಖ ರಾಜಕೀಯ ನಾಯಕರು, ಸಂಸದರು ಹಾಗೂ ಸಾವಿರಾರು ನಾಗರಿಕರು ಭಾಗವಹಿಸಿದ್ದರು. ಈ ದೃಶ್ಯಗಳನ್ನು ಉಲ್ಲೇಖಿಸಿದ ಟ್ರಂಪ್, “ಇರಾನ್‌ನ ಜನರು ಖಮೇನಿಯನ್ನು ದ್ವೇಷಿಸುತ್ತಿದ್ದರು. ಈಗ ಅವರು ಅಳುತ್ತಿರುವುದು ನಂಬಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದೇ ವೇಳೆ, ಇರಾನ್‌ನ ಉಳಿದಿರುವ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಮರ್ಥ್ಯ ಅಮೆರಿಕಕ್ಕೆ ಇದೆ. ಆದರೆ, ಮಾತುಕತೆ ಮುಂದುವರಿಸಲು ನಾಯಕತ್ವ ಉಳಿಯಬೇಕು ಎಂಬ ಕಾರಣಕ್ಕೆ ಅಂತಹ ನಿರ್ಧಾರ ಕೈಗೊಂಡಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಇರಾನ್ ಪರದಿಂದ ಒಪ್ಪಂದಕ್ಕೆ ಆಸಕ್ತಿ ವ್ಯಕ್ತವಾಗಿದ್ದು, ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ಅವರು ಹೇಳಿದ್ದಾರೆ.
ಖಮೇನಿ ಅವರ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಅಮೆರಿಕ ಹಾಗೂ ಇರಾನ್ ನಡುವೆ ನಡೆಯಬೇಕಿದ್ದ ಮಾತುಕತೆಗೆ ಒಂದು ವಾರ ವಿರಾಮ ನೀಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಕಡೆಯಿಂದಲೂ ದಾಳಿ ನಡೆಯುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
36 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ನಾಯಕತ್ವ ವಹಿಸಿದ್ದ ಅಲಿ ಖಮೇನಿ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಯುದ್ಧದ ಪರಿಸ್ಥಿತಿಯಿಂದಾಗಿ ಅವರ ಅಂತ್ಯಕ್ರಿಯೆ ತಡವಾಗಿ ನಡೆಯುತ್ತಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ದೇಶ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅವ್ಯವಸ್ಥೆ? ಬಿಎಲ್‌ಒಗಳ ಮೇಲೆ ಒತ್ತಡ ಆರೋಪಿಸಿದ ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಸ್ಥೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೂತ್ ಮಟ್ಟದ ಅಧಿಕಾರಿಗಳ (BLO) ಮೇಲೆ ಒತ್ತಡ ಹೇರುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಬದಲು ಕಲ್ಯಾಣ ಮಂಟಪ, ಚೌಲ್ಟ್ರಿ ಹಾಗೂ ಮಸೀದಿಗಳಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ದೂರಿದರು. ಕೆಲವು ಶಾಸಕರ ಕಚೇರಿಗಳಲ್ಲೇ ಬಿಎಲ್‌ಒಗಳನ್ನು ಕೂರಿಸಿ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ, ಈ ಕುರಿತು ಸಾಕ್ಷ್ಯ ಸಮೇತ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಿತರಿಸಲಾಗುತ್ತಿರುವ ಅರ್ಜಿಗಳ ಮೇಲೆ ಕಾಂಗ್ರೆಸ್ ಮುಖಂಡರ ಫೋಟೋಗಳು ಮುದ್ರಣಗೊಂಡಿರುವ ವಿಚಾರವನ್ನೂ ಚುನಾವಣಾ ಆಯೋಗದ ಗಮನಕ್ಕೆ ತಂದಿರುವುದಾಗಿ ವಿಜಯೇಂದ್ರ ಹೇಳಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿರುವ ಎಲ್ಲೆಡೆ ಮರುಪರಿಷ್ಕರಣೆ ನಡೆಸುವಂತೆ ಆಗ್ರಹಿಸಿದರು.
ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಮನೆಗಳ ಸಂಖ್ಯೆ ಹೆಚ್ಚಳವಾಗದೆ ಮತದಾರರ ಸಂಖ್ಯೆ ಮಾತ್ರ ಹೆಚ್ಚಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು. ಅಕ್ರಮ ಮತದಾರರನ್ನು ತಡೆಯಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವುದು ಅಗತ್ಯ ಎಂದು ಒತ್ತಾಯಿಸಿದರು.
ಇದೇ ವೇಳೆ, ಬರ ಪರಿಸ್ಥಿತಿಯಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ನಡೆಸುವುದು ಸೂಕ್ತ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
