Connect with us

ದೇಶ

ಕರ್ನಾಟಕ ಮಾಹಿತಿ ಆಯೋಗದ ಕಾರ್ಯವೈಖರಿ ಅಧ್ಯಯನ ಮಾಡಿದ ಶ್ರೀಲಂಕಾ ಪತ್ರಕರ್ತರ ತಂಡ

Published

on

ಬೆಂಗಳೂರು: ಶ್ರೀಲಂಕಾ ಪತ್ರಕರ್ತರ (Sri Lankan Journalists) ನಿಯೋಗ ಕರ್ನಾಟಕ ಮಾಹಿತಿ ಆಯೋಗಕ್ಕೆ (Karnataka Information Commission) ಭೇಟಿ ನೀಡಿ ರಾಜ್ಯ ಮಾಹಿತಿ ಆಯುಕ್ತರೊಂದಿಗೆ ಮಹತ್ವದ ಸಂವಾದ ನಡೆಸಿತು. ಕರ್ನಾಟಕ ಪ್ರವಾಸದಲ್ಲಿರುವ ಈ ನಿಯೋಗ, ಮಾಹಿತಿ ಹಕ್ಕು ಕಾಯ್ದೆ (RTI) ಜಾರಿ, ಮಾಹಿತಿ ಆಯೋಗದ ಕಾರ್ಯನಿರ್ವಹಣೆ ಹಾಗೂ ಮಾಧ್ಯಮ ಸ್ವಾತಂತ್ರ್ಯ ಕುರಿತು ಆಳವಾದ ಚರ್ಚೆ ನಡೆಸಿತು.

ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ಮಾಹಿತಿ ಆಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ಪ್ರಭಾರಿ ಮುಖ್ಯ ಮಾಹಿತಿ ಆಯುಕ್ತ ಕೆ. ರಾಮನ್ ವಿವರಿಸಿದರು. ಆಯುಕ್ತರಾದ ಬದ್ರುದ್ದೀನ್ ಕೆ., ರಾಜಶೇಖರ್, ರುದ್ರಣ್ಣ ಹರ್ತಿಕೋಟೆ ಹಾಗೂ ಡಾ. ಮಮತಾ ಅವರು ಆಯೋಗದ ಕಾರ್ಯಪದ್ದತಿ, ಪಾರದರ್ಶಕತೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀಲಂಕಾದಲ್ಲಿ ಕಳೆದ ಮೂರು ವರ್ಷಗಳಿಂದ ಮಾತ್ರ ಮಾಹಿತಿ ಹಕ್ಕು ಆಯೋಗ (RTI Commission) ಪ್ರಾರಂಭವಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ಮಾಜಿ ಕಾರ್ಯದರ್ಶಿ ನಿಶ್ಚಿನಾಂತು ಆಲ್ವೀಸ್ ಹಾಗೂ ಹಿರಿಯ ಪತ್ರಕರ್ತ ಪಾತುಮ್ ಪಾಸ್ಕೂಲ್ ತಿಳಿಸಿದರು. ಕರ್ನಾಟಕ ಮಾಹಿತಿ ಆಯೋಗದ ಕಾರ್ಯನಿರ್ವಹಣೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಅನುಭವಗಳನ್ನು ಶ್ರೀಲಂಕಾದಲ್ಲಿಯೂ ಜಾರಿಗೊಳಿಸುವ ಅಗತ್ಯವಿದೆ ಎಂದರು.

ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘದ ಹೋರಾಟದ ಫಲವಾಗಿ ಪತ್ರಕರ್ತರಿಗೆ ಬಸ್ ಪಾಸ್, ಮಾಸಾಶನ ಸೇರಿದಂತೆ ಹಲವು ಸೌಲಭ್ಯಗಳು ದೊರೆತಿವೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಲಂಕಾ ನಿಯೋಗ, ತಮ್ಮ ದೇಶದಲ್ಲಿ ಸರ್ಕಾರದಿಂದ ಪತ್ರಕರ್ತರಿಗೆ ಯಾವುದೇ ನೇರ ಸೌಲಭ್ಯಗಳಿಲ್ಲ. ಆದರೆ ಮಾಧ್ಯಮದ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದೆ ಸ್ವತಂತ್ರವಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ದೇಶ

ವಿದ್ಯಾರ್ಥಿಗಳಿಗೆ ಪಾಠವೇ? SIR ಕರ್ತವ್ಯವೇ? ದ್ವಂದ್ವದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು

Published

on

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ ಸರ್ಕಾರಿ ಶಾಲಾ ಶಿಕ್ಷಕರನ್ನು ದೊಡ್ಡ ಪ್ರಮಾಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ನಿಯೋಜಿಸಿರುವುದು ಶಾಲಾ ಶಿಕ್ಷಣದ ಮೇಲೆ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ. ಬೋಧನಾ ಕರ್ತವ್ಯ ಮತ್ತು ಚುನಾವಣಾ ಸಂಬಂಧಿತ ಜವಾಬ್ದಾರಿಗಳನ್ನು ಒಂದೇ ವೇಳೆ ನಿರ್ವಹಿಸಬೇಕಾದ ಕಾರಣ ಶಿಕ್ಷಕರು ತೀವ್ರ ಒತ್ತಡ ಎದುರಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಹುತೇಕ ಶಿಕ್ಷಕರನ್ನು ಎಸ್‌ಐಆರ್ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪರಿಣಾಮವಾಗಿ ಕೆಲವು ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಮಾತ್ರ ಉಳಿದಿದ್ದು, ಅವರು ಎಲ್ಲ ತರಗತಿಗಳಿಗೆ ಪಾಠ ಮಾಡುವುದರ ಜೊತೆಗೆ ಮಧ್ಯಾಹ್ನದ ಊಟ, ಹಾಲು, ಮೊಟ್ಟೆ, ಬಾಳೆಹಣ್ಣು ವಿತರಣೆ, ವಿದ್ಯಾರ್ಥಿಗಳ ಆನ್‌ಲೈನ್ ಹಾಜರಾತಿ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಬೇಕಾಗಿದೆ.

ಶಾಲಾ ಅವಧಿಯಲ್ಲೇ ಎಸ್‌ಐಆರ್ ಸಭೆಗಳಿಗೆ ಹಾಜರಾಗುವಂತೆ ವಾಟ್ಸಾಪ್ ಮೂಲಕ ಸೂಚನೆ ಬಂದಿರುವುದರಿಂದ ಯಾವ ಕರ್ತವ್ಯಕ್ಕೆ ಆದ್ಯತೆ ನೀಡಬೇಕು ಎಂಬ ಗೊಂದಲ ಶಿಕ್ಷಕರಲ್ಲಿ ಮೂಡಿದೆ. ಸಭೆಗೆ ಗೈರಾಗಿದ್ದರೆ ಶಿಸ್ತು ಕ್ರಮದ ಭೀತಿಯೂ ಎದುರಾಗುತ್ತಿದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ.

ಇನ್ನೊಂದೆಡೆ, ನಗರ ಪ್ರದೇಶಗಳಲ್ಲಿ ಮತದಾರರು ಆಗಾಗ್ಗೆ ಮನೆ ಬದಲಾಯಿಸುತ್ತಿರುವುದರಿಂದ ಮನೆ-ಮನೆ ಸಮೀಕ್ಷೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಹಳೆಯ ಮತದಾರರ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಲು ಹೆಚ್ಚಿನ ಸಮಯ ಬೇಕಾಗುತ್ತಿದೆ.

ಕಡಿಮೆ ಶಿಕ್ಷಕರಿರುವ ಶಾಲೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಐವರು ಶಿಕ್ಷಕರಿರುವ ಶಾಲೆಯಲ್ಲಿ ನಾಲ್ವರನ್ನು ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜಿಸಿರುವ ಉದಾಹರಣೆಗಳೂ ಇದ್ದು, ಉಳಿದ ಒಬ್ಬ ಶಿಕ್ಷಕರು ಹಲವು ತರಗತಿಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಜೊತೆಗೆ ಕೆಲ ಶಿಕ್ಷಕರನ್ನು ತಮ್ಮ ಶಾಲೆಯಿಂದ 20 ಕಿ.ಮೀ.ಗೂ ಹೆಚ್ಚು ದೂರದ ಪ್ರದೇಶಗಳಿಗೆ ನಿಯೋಜಿಸಿರುವುದರಿಂದ ಪ್ರಯಾಣ ಹಾಗೂ ಸಮೀಕ್ಷಾ ಕಾರ್ಯದ ಒತ್ತಡವೂ ಹೆಚ್ಚಾಗಿದೆ.

Continue Reading

ಕ್ರೀಡೆ

ನಾರ್ವೆ ವಿರುದ್ಧ ಬ್ರೆಜಿಲ್ ಸೋಲು: ಕಣ್ಣೀರಿನೊಂದಿಗೆ ನಿವೃತ್ತಿ ಘೋಷಿಸಿದ ನೇಮರ್

Published

on

ನ್ಯೂಯಾರ್ಕ್: ಐದು ಬಾರಿ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ (Brazil) ತಂಡಕ್ಕೆ 2026 FIFA World Cup ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಭಾರೀ ಆಘಾತ ಎದುರಾಗಿದೆ. ನಾರ್ವೆ (Norway) ವಿರುದ್ಧ ನಡೆದ ಪಂದ್ಯದಲ್ಲಿ ಬ್ರೆಜಿಲ್ 1-2 ಗೋಲುಗಳ ಅಂತರದಿಂದ ಸೋಲು ಕಂಡಿದ್ದು, ವಿಶ್ವಕಪ್‌ನಿಂದ ಹೊರಬಿದ್ದಿದೆ. ಈ ಸೋಲಿನ ಬೆನ್ನಲ್ಲೇ ಬ್ರೆಜಿಲ್‌ನ ಸ್ಟಾರ್ ಫುಟ್‌ಬಾಲರ್ ನೇಮರ್ (Neymar) ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಘೋಷಿಸಿದ್ದಾರೆ.

ನ್ಯೂಯಾರ್ಕ್‌ನ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಾರ್ವೆಯ ಯುವ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ (Erling Haaland) ಎರಡು ಗೋಲುಗಳನ್ನು ದಾಖಲಿಸಿ ತಂಡವನ್ನು ಮೊದಲ ಬಾರಿಗೆ ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆಸಿದರು. 1990ರ ಬಳಿಕ ಬ್ರೆಜಿಲ್ ತಂಡವು ವಿಶ್ವಕಪ್ ಟೂರ್ನಿಯಿಂದ ಇಷ್ಟು ಬೇಗ ಹೊರಬಿದ್ದಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಪಂದ್ಯದ ಬಳಿಕ ಭಾವುಕರಾಗಿ ಮಾತನಾಡಿದ ನೇಮರ್, “ನಾನು ನನ್ನಿಂದಾದ ಎಲ್ಲ ಪ್ರಯತ್ನ ಮಾಡಿದ್ದೇನೆ. ಆದರೆ ಈಗ ನನ್ನ ಅಂತಾರಾಷ್ಟ್ರೀಯ ಪಯಣ ಮುಗಿದಿದೆ. ಎಲ್ಲಿಂದ ಆರಂಭಿಸಿದ್ದೆನೋ ಅಲ್ಲಿಯೇ ನನ್ನ ಪಯಣ ಅಂತ್ಯಗೊಳ್ಳುತ್ತಿದೆ” ಎಂದು ಕಣ್ಣೀರಿನೊಂದಿಗೆ ಹೇಳಿದರು.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಪಂದ್ಯದಲ್ಲಿ ಕೊನೆಯ ಕ್ಷಣದವರೆಗೂ ಆಡಿದ ನೇಮರ್, ಇಂಜುರಿ ಟೈಮ್‌ನ 90+10ನೇ ನಿಮಿಷದಲ್ಲಿ ಬ್ರೆಜಿಲ್ ಪರ ಏಕೈಕ ಗೋಲು ದಾಖಲಿಸಿದರು.

ಈ ಗೋಲಿನೊಂದಿಗೆ ನೇಮರ್ ಬ್ರೆಜಿಲ್ ಪರ 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್‌ಗಳನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ. ಇದರ ಮೂಲಕ ಅವರು ಬ್ರೆಜಿಲ್ ಪರ ಸಾರ್ವಕಾಲಿಕ ಗರಿಷ್ಠ ಗೋಲುಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡು, ಅಂತಾರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನಕ್ಕೆ ಭಾವುಕ ವಿದಾಯ ಹೇಳಿದ್ದಾರೆ.

Continue Reading

ದೇಶ

Sakkath Santhe 2026: ಗೃಹ ಉತ್ಪನ್ನಗಳಿಗೆ ವೇದಿಕೆ, ಇಂದಿರಾನಗರದಲ್ಲಿ ಜನಸಾಗರ

Published

on

ಬೆಂಗಳೂರು: ನಗರದ ಇಂದಿರಾನಗರ ಬಡಾವಣೆಯಲ್ಲಿ ಆಯೋಜಿಸಲಾದ ‘ಸಕ್ಕತ್ ಸಂತೆ 2026’ (Sakkath Santhe 2026) ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ನೂರಾರು ವೈವಿಧ್ಯಮಯ ಮಳಿಗೆಗಳಲ್ಲಿ ಪ್ರದರ್ಶನಗೊಂಡ ಗೃಹ ಉತ್ಪನ್ನಗಳು, ಕೈಗಾರಿಕಾ ವಸ್ತುಗಳು ಹಾಗೂ ಸ್ಥಳೀಯ ಉದ್ಯಮಿಗಳ ಉತ್ಪನ್ನಗಳನ್ನು ವೀಕ್ಷಿಸಲು ಸಾವಿರಾರು ಜನರು ಭೇಟಿ ನೀಡಿ ಖರೀದಿಸಿದರು.

ವಿಶೇಷವಾಗಿ ಮಹಿಳಾ ಕಿರು ಉದ್ಯಮಿಗಳು, ಗೃಹಾಧಾರಿತ ಉದ್ಯಮಿಗಳು ಹಾಗೂ ಸ್ಥಳೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಸಂತೆ ಆಯೋಜಿಸಲಾಗಿತ್ತು. ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸುವ ಅವಕಾಶ ದೊರೆತಿದ್ದು, ಉತ್ತಮ ವ್ಯಾಪಾರವೂ ನಡೆದಿರುವುದಾಗಿ ಭಾಗವಹಿಸಿದ ಉದ್ಯಮಿಗಳು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮಿಸೆಸ್ ಇಂಡಿಯಾ 2021 ವಿಜೇತೆ ಡಾ. ಸ್ಮಿತಾ ಪ್ರಭು ಚಾಲನೆ ನೀಡಿದರು. ಬಳಿಕ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಪ್ರದರ್ಶನಗೊಂಡಿದ್ದ ನವೀನ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ವೀಕ್ಷಿಸಿದರು. ಅಲ್ಲದೆ ಮಹಿಳಾ ಉದ್ಯಮಿಗಳು ಹಾಗೂ ಪ್ರತಿಭಾವಂತ ಕಿರು ಉದ್ಯಮಿಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಯತ್ನಗಳನ್ನು ಶ್ಲಾಘಿಸಿ ಇನ್ನಷ್ಟು ಬೆಳೆಯುವಂತೆ ಪ್ರೋತ್ಸಾಹಿಸಿದರು.

ಈ ಯಶಸ್ವಿ ಕಾರ್ಯಕ್ರಮದ ಹಿಂದೆ ಶ್ರಮಿಸಿದ ಸ್ವಾತಿ ಶೆಟ್ಟಿ ಹಾಗೂ ಅವರ ಸಂಪೂರ್ಣ ತಂಡಕ್ಕೆ ಸಾರ್ವಜನಿಕರು, ಭಾಗವಹಿಸಿದ ಉದ್ಯಮಿಗಳು ಮತ್ತು ಅತಿಥಿಗಳು ಅಭಿನಂದನೆ ಸಲ್ಲಿಸಿದರು. ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಿಸುವುದರ ಜೊತೆಗೆ ಸಣ್ಣ ಉದ್ಯಮಗಳ ಬೆಳವಣಿಗೆಗೂ ನೆರವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ‘ಸಕ್ಕತ್ ಸಂತೆ’ ಆಯೋಜಿಸಲು ತಂಡಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Continue Reading

Trending