Connect with us

ದೇಶ

ದೇಶದಲ್ಲಿ ಇಂದಿನಿಂದ ಹೊಸ ಅಪರಾಧ ಕಾನೂನುಗಳು ಜಾರಿಗೆ; ಏನೆಲ್ಲ ಬದಲಾವಣೆ ಗೊತ್ತಾ? – NEW CRIMINAL LAWS

ನವದೆಹಲಿ: ದೇಶಾದ್ಯಂತ ಮೂರು ಹೊಸ ಅಪರಾಧ ಕಾನೂನುಗಳು ಸೋಮವಾರ (ಜುಲೈ 1)ದಿಂದ ಜಾರಿಗೆ ಬರಲಿವೆ. ಈ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರಲಿದ್ದು, ವಸಾಹತುಶಾಹಿ ಯುಗದ ಕಾನೂನುಗಳಿಗೆ ಇತಿಶ್ರೀ ಹಾಡಲಿವೆ.

ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಂಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಗೆ ಮುನ್ನುಡಿ ಬರೆಯಲಿವೆ.

ಶೂನ್ಯ ಎಫ್‌ಐಆರ್, ಪೊಲೀಸ್ ದೂರುಗಳ ಆನ್‌ಲೈನ್ ನೋಂದಣಿ, ಎಸ್‌ಎಂಎಸ್‌ನಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಮನ್ಸ್ ಮತ್ತು ಎಲ್ಲ ಘೋರ ಅಪರಾಧಗಳಿಗೆ ಅಪರಾಧದ ದೃಶ್ಯಗಳ ಕಡ್ಡಾಯ ವಿಡಿಯೋಗ್ರಫಿಯಂತಹ ನಿಬಂಧನೆಗಳನ್ನು ಒಳಗೊಂಡಿವೆ. ಪ್ರಸ್ತುತ ಕೆಲವು ಸಾಮಾಜಿಕ ವಾಸ್ತವತೆಗಳು ಮತ್ತು ಅಪರಾಧಗಳನ್ನು ಪರಿಹರಿಸಲು ಈ ಕಾನೂನುಗಳು ಪ್ರಯತ್ನಿಸಲಿವೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾರ್ಯವಿಧಾನವನ್ನು ಒದಗಿಸಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

45 ದಿನಗಳಲ್ಲಿ ತೀರ್ಪು: ಹೊಸ ಕಾನೂನುಗಳ ಪ್ರಕಾರ, ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳಲ್ಲಿ ತೀರ್ಪು ಬರಬೇಕು. ಮೊದಲ ವಿಚಾರಣೆಯ 60 ದಿನಗಳಲ್ಲಿ ಆರೋಪಪಟ್ಟಿ ರಚಿಸಬೇಕು. ಅತ್ಯಾಚಾರ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಬೇಕು ಮತ್ತು ವೈದ್ಯಕೀಯ ವರದಿಗಳು ಏಳು ದಿನಗಳಲ್ಲಿ ಬರಬೇಕು.

ದೇಶದ್ರೋಹವಲ್ಲ, ದೇಶವಿರೋಧಿ: ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯ ಕೃತ್ಯಗಳನ್ನು ವ್ಯಾಖ್ಯಾನಿಸಲಾಗಿದೆ. ದೇಶದ್ರೋಹವನ್ನು ದೇಶವಿರೋಧಿ ಎಂದು ಬದಲಾಯಿಸಲಾಗಿದೆ. ಎಲ್ಲ ತಪಾಸಣೆ ಮತ್ತು ಜಪ್ತಿ ಕಾರ್ಯಗಳನ್ನು ವಿಡಿಯೋ ರೆಕಾರ್ಡಿಂಗ್​ಅನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಕುರಿತು ಹೊಸ ಅಧ್ಯಾಯ ಸೇರಿಸಲಾಗಿದೆ. ಯಾವುದೇ ಮಗು ಖರೀದಿ ಮತ್ತು ಮಾರಾಟ ಮಾಡುವುದು ಘೋರ ಅಪರಾಧವೆಂದು ಪರಿಗಣಿಸಲಾಗಿದೆ ಮತ್ತು ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ.

ಈಗ ಕೇವಲ 358 ಸೆಕ್ಷನ್​ಗಳು: ಭಾರತೀಯ ದಂಡ ಸಂಹಿತೆಯಲ್ಲಿನ 511 ಸೆಕ್ಷನ್​ಗಳ ಬದಲಿಗೆ ಕೇವಲ 358 ಸೆಕ್ಷನ್​ಗಳು ಒಳಗೊಂಡಿವೆ. ಉದಾಹರಣೆಗೆ, ಸೆಕ್ಷನ್​ 6ರಿಂದ 52ರ ವರೆಗಿನ ವ್ಯಾಖ್ಯಾನಗಳನ್ನು ಒಂದು ಸೆಕ್ಷನ್​ ಅಡಿಯಲ್ಲಿ ತರಲಾಗಿದೆ. 18 ಸೆಕ್ಷನ್​ಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ವಿವಾಹದ ಸುಳ್ಳು ಭರವಸೆಯ ಪ್ರಕರಣಗಳು, ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರ, ಗುಂಪು ಹತ್ಯೆ, ಸರಗಳ್ಳತನ ಇತ್ಯಾದಿಗಳು ವರದಿಯಾಗುತ್ತವೆ. ಆದರೆ, ಪ್ರಸ್ತುತ ಭಾರತೀಯ ದಂಡ ಸಂಹಿತೆ ಅಂತಹ ಘಟನೆಗಳನ್ನು ಎದುರಿಸಲು ನಿರ್ದಿಷ್ಟ ನಿಬಂಧನೆಗಳನ್ನು ಹೊಂದಿಲ್ಲ. ಈಗ ಇವುಗಳನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಠಾಣೆಗೆ ಹೋಗುವ ಅಗತ್ಯವಿಲ್ಲ: ಹೊಸ ಕಾನೂನುಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ಈಗ ದೈಹಿಕವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡುವ ಅಗತ್ಯವಿಲ್ಲದೇ, ಎಲೆಕ್ಟ್ರಾನಿಕ್ ಸಂವಹನದ ಮೂಲಕ ಘಟನೆಗಳನ್ನು ವರದಿ ಮಾಡಬಹುದು. ಇದು ಸುಲಭವಾಗಿ ಮತ್ತು ತ್ವರಿತವಾಗಿ ವರದಿ ಮಾಡಲು ಅನುಮತಿಸುತ್ತದೆ. ಪೊಲೀಸರಿಂದ ತ್ವರಿತ ಕ್ರಮವನ್ನು ಸುಗಮಗೊಳಿಸುತ್ತದೆ. ಝೀರೋ ಎಫ್‌ಐಆರ್‌ನ ಪರಿಚಯದೊಂದಿಗೆ ಒಬ್ಬ ವ್ಯಕ್ತಿಯು ಅಧಿಕಾರ ವ್ಯಾಪ್ತಿಯನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಬಹುದು.

ಕಾನೂನಿನಲ್ಲಿನ ಹೊಸ ಸೇರ್ಪಡೆ: ಇದು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸುವಲ್ಲಿ ವಿಳಂಬವನ್ನು ನಿವಾರಿಸುತ್ತದೆ ಮತ್ತು ಅಪರಾಧದ ತಕ್ಷಣದ ವರದಿಯನ್ನು ಖಚಿತಪಡಿಸುತ್ತದೆ. ಕಾನೂನಿನಲ್ಲಿನ ಆಸಕ್ತಿದಾಯಕ ಸೇರ್ಪಡೆಯೆಂದರೆ, ಬಂಧನದ ಸಂದರ್ಭದಲ್ಲಿ ವ್ಯಕ್ತಿಯು ತನ್ನ ಆಯ್ಕೆಯ ವ್ಯಕ್ತಿಗೆ ತನ್ನ ಪರಿಸ್ಥಿತಿಯ ಬಗ್ಗೆ ತಿಳಿಸುವ ಹಕ್ಕನ್ನು ಹೊಂದಿರುತ್ತಾನೆ. ಇದು ಬಂಧಿತ ವ್ಯಕ್ತಿಗೆ ತಕ್ಷಣದ ಬೆಂಬಲ ಮತ್ತು ಸಹಾಯವನ್ನು ಖಚಿತಪಡಿಸುತ್ತದೆ.

ಠಾಣೆಗಳಲ್ಲಿ ಬಂಧನದ ವಿವರ: ಇದಲ್ಲದೆ, ಬಂಧನದ ವಿವರಗಳನ್ನು ಈಗ ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಬಂಧಿತ ವ್ಯಕ್ತಿಯ ಕುಟುಂಬಗಳು ಮತ್ತು ಸ್ನೇಹಿತರಿಗೆ ಪ್ರಮುಖ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ. ಪ್ರಕರಣಗಳು ಮತ್ತು ತನಿಖೆಗಳನ್ನು ಬಲಪಡಿಸಲು ಫೋರೆನ್ಸಿಕ್ ತಜ್ಞರು ಗಂಭೀರ ಅಪರಾಧಗಳ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ.

ಸಂತ್ರಸ್ತರಿಗೆ ಉಚಿತ ಚಿಕಿತ್ಸೆ: ಹೊಸ ಕಾನೂನುಗಳ ಅಡಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಸಂತ್ರಸ್ತರು ತಮ್ಮ ಪ್ರಕರಣದ ಪ್ರಗತಿಯನ್ನು 90 ದಿನಗಳಲ್ಲಿ ನಿಯಮಿತವಾಗಿ ಮಾಹಿತಿ ಪಡೆಯಲು ಅರ್ಹರಾಗಿರುತ್ತಾರೆ. ಈ ನಿಬಂಧನೆಯು ಸಂತ್ರಸ್ತರಿಗೆ ಮಾಹಿತಿ ನೀಡುತ್ತದೆ ಮತ್ತು ಕಾನೂನು ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಹೊಸ ಕಾನೂನುಗಳು ಎಲ್ಲ ಆಸ್ಪತ್ರೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಸಂತ್ರಸ್ತರಿಗೆ ಉಚಿತ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ.

ಎಸ್‌ಎಂಎಸ್‌ ಮೂಲಕ ಸಮನ್ಸ್: ಎಸ್‌ಎಂಎಸ್‌ನಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಮನ್ಸ್ ಜಾರಿ ಮಾಡಬಹುದು. ಇದರಿಂದ ಕಾನೂನು ಪ್ರಕ್ರಿಯೆಗಳನ್ನು ತ್ವರಿತಗೊಳಿಸಬಹುದು, ದಾಖಲೆಗಳನ್ನು ಕಡಿಮೆ ಮಾಡಬಹುದು ಮತ್ತು ಒಳಗೊಂಡಿರುವ ಎಲ್ಲ ಪಕ್ಷಗಳ ನಡುವೆ ಸಮರ್ಥ ಸಂವಹನ ಖಚಿತಪಡಿಸಿಕೊಳ್ಳಬಹುದು. ಜೊತೆಗೆ ಆರೋಪಿ ಮತ್ತು ಸಂತ್ರಸ್ತರು ಇಬ್ಬರೂ ಎಫ್‌ಐಆರ್, ಪೊಲೀಸ್ ವರದಿ, ಚಾರ್ಜ್ ಶೀಟ್, ಹೇಳಿಕೆಗಳು, ತಪ್ಪೊಪ್ಪಿಗೆಗಳು ಮತ್ತು ಇತರ ದಾಖಲೆಗಳ ಪ್ರತಿಗಳನ್ನು 14 ದಿನಗಳಲ್ಲಿ ಸ್ವೀಕರಿಸಲು ಅರ್ಹರಾಗಿರುತ್ತಾರೆ.

ದೇಶ

ನವರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ – ಭದ್ರತೆ ಬಿಗಿ ಕ್ರಮ

ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನವರಾತ್ರಿಯ ವೇಳೆ ಭಯೋತ್ಪಾದಕ ದಾಳಿಯ ಅಪಾಯವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಯಲ್ಲಿದೆ.

ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಆಗಸ್ಟ್ 4ರಂದು ಎಚ್ಚರಿಕೆ ಪ್ರಕಟಿಸಿ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭಯೋತ್ಪಾದನೆ ಅಥವಾ ಸಮಾಜ ವಿರೋಧಿ ಶಕ್ತಿಗಳಿಂದ ದಾಳಿ ಸಂಭವಿಸಬಹುದೆಂದು ಸೂಚಿಸಿದೆ.

🕵️ ಗುಪ್ತಚರ ಮೂಲದ ಮಹತ್ವದ ಎಚ್ಚರಿಕೆ:

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಏರ್‌ಸ್ಟ್ರಿಪ್‌ಗಳು, ಹೆಲಿಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬಂದಿವೆ:

  • ಸಿಬ್ಬಂದಿ ಮತ್ತು ಸಂದರ್ಶಕರ ಗುರುತಿನ ಪರಿಶೀಲನೆ
  • ಸಿಸಿಟಿವಿ ಕಣ್ಗಾವಲು ಬಿಗಿತ
  • ಸರಕು, ಪಾರ್ಸೆಲ್ ಮತ್ತು ಮೇಲ್‌ಗಳ ತಪಾಸಣೆ
  • ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಹಕಾರ

🇮🇳 ರಾಷ್ಟ್ರೀಯ ಭದ್ರತೆಗೆ ಒತ್ತು:

ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಈ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಸಿದ್ಧವಾಗಿಡಬೇಕು. ತಪಾಸಣೆ ವಿಳಂಬದ ಸಾಧ್ಯತೆಯಿರುವುದರಿಂದ ಸಹಕಾರ ನೀಡುವಂತೆ BCAS ಮನವಿ ಮಾಡಿದೆ.

Continue Reading

ದೇಶ

ಅಮೆರಿಕ-ರಷ್ಯಾ ವ್ಯವಹಾರ: ಭಾರತದ ಟೀಕೆಗೆ ಟ್ರಂಪ್ ನುಣುಚು ಪ್ರತಿಕ್ರಿಯೆ

ವಾಷಿಂಗ್ಟನ್: ರಷ್ಯಾದಿಂದ ಈಗಲೂ ವ್ಯವಹಾರ ನಡೆಸುತ್ತಿರುವ ಅಮೆರಿಕದ ಕುರಿತಾಗಿ ಭಾರತ ಮಾಡಿರುವ ಗಂಭೀರ ಆರೋಪಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚು ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಆರೋಪಿಸಿದಂತೆ, ಅಮೆರಿಕ 2024ರಲ್ಲಿ 1.1 ಶತಕೋಟಿ ಡಾಲರ್‌ ಮೌಲ್ಯದ ರಸಗೊಬ್ಬರ, 878 ಮಿಲಿಯನ್ ಡಾಲರ್‌ ಮೌಲ್ಯದ ಪಲ್ಲಾಡಿಯಮ್‌ ಸೇರಿದಂತೆ ಹಲವು ಅಮೂಲ್ಯ ಲೋಹಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಯುರೇನಿಯಂ ಹೆಕ್ಸಾಫ್ಲೋರೈಡ್‌ನಂತಹ ಪರಮಾಣು ಉತ್ಪನ್ನಗಳ ಆಮದು ಕೂಡ ಮುಂದುವರಿದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್, “ನನಗೆ ಈ ವ್ಯಾಪಾರದ ವಿವರಗಳು ತಿಳಿದಿಲ್ಲ, ನಾನು ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಭಾರತದ ಖಡಕ್ ಪ್ರತಿಕ್ರಿಯೆ:
ಭಾರತ, ತನ್ನ ರಷ್ಯಾ ತೈಲ ಆಮದು ಬಗ್ಗೆ ಅಮೆರಿಕದ ಟೀಕೆಗೆ ಅಂಕಿ-ಅಂಶಗಳೊಂದಿಗೆ ತಿರುಗೇಟು ನೀಡಿದೆ. ಯುರೋಪ್ ದೇಶಗಳೇ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ಎಲ್‌ಎನ್‌ಜಿ, ರಸಗೊಬ್ಬರ, ಲೋಹಗಳನ್ನು ಆಮದು ಮಾಡಿಕೊಳ್ಳುತ್ತಿವೆ. 2024ರಲ್ಲಿ ಯುರೋಪಿಯನ್ ಒಕ್ಕೂಟವು 67.5 ಬಿಲಿಯನ್ ಯುರೋಗಳಷ್ಟು ಸರಕು ವ್ಯಾಪಾರ ಹಾಗೂ 17.2 ಬಿಲಿಯನ್ ಯುರೋಗಳಷ್ಟು ಸೇವಾ ವ್ಯಾಪಾರವನ್ನು ರಷ್ಯಾ ಜೊತೆ ನಡೆಸಿದೆ.

ಟ್ರಂಪ್ ಅವರ ಆರೋಪ:
ಟ್ರಂಪ್ ಹೇಳುವಂತೆ, ಭಾರತ ರಷ್ಯಾದ ತೈಲವನ್ನು ಖರೀದಿ ಮಾಡುತ್ತಿದ್ದು, ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ಅವರು ಈ ಕಾರಣಕ್ಕಾಗಿ ಭಾರತದಿಂದ ಸಂಗ್ರಹಿಸಬೇಕಾದ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.

ಭಾರತದ ನಿಲುವು:
ಭಾರತ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂಧನದ ದರಗಳನ್ನು ಜನತೆಗೆ ಕೈಗೆಟುಕುವಂತೆ ಇರಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

Continue Reading

ಕ್ರೀಡೆ

ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!

ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.

ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್‌ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.

ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.

ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.

Continue Reading

Trending