ದೇಶ
ಯಾವುದೇ ಶ್ಯೂರಿಟಿ ಇಲ್ಲದೆ ಬಡ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೂ ಶಿಕ್ಷಣ ಸಾಲ: ಅರ್ಜಿ ಸಲ್ಲಿಸುವುದು ಹೇಗೆ?
PM Vidyalaxmi Scheme Benefits : ಉನ್ನತ ಶಿಕ್ಷಣವನ್ನು ಮುಂದುವರಿಸುವ ಬಯಕೆ ಏನೋ ಇರುತ್ತದೆ. ಆದರೆ ಅನೇಕ ಉತ್ಕೃಷ್ಟ ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆ ಕಾಡುತ್ತದೆ. ಇದರಿಂದ ಅಧ್ಯಯನದಿಂದ ಹಲವರು ದೂರ ಉಳಿಯುತ್ತಾರೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ವಿದ್ಯಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸಚಿವ ಸಂಪುಟ ಬುಧವಾರ ಈ ಯೋಜನೆಗೆ ಅನುಮೋದನೆ ನೀಡಿದೆ. ಇದು ಯಾವುದೇ ಮೇಲಾಧಾರವಿಲ್ಲದೇ ಶಿಕ್ಷಣ ಸಾಲಗಳನ್ನು ಒದಗಿಸುತ್ತದೆ. ಈವರೆಗೆ 4.5 ಲಕ್ಷದವರೆಗೆ ಬಡ್ಡಿ ರಹಿತ ಶಿಕ್ಷಣ ಸಾಲ ನೀಡಲಾಗುತ್ತಿತ್ತು. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಸಬ್ಸಿಡಿ ಬಡ್ಡಿಯೊಂದಿಗೆ 10 ಲಕ್ಷ ರೂಗಳ ವರೆಗೂ ಸಾಲ ನೀಡಲು ನಿರ್ಧರಿಸಿದೆ. ಇದರಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳು ಯಾವುದೇ ಆರ್ಥಿಕ ತೊಂದರೆಯಿಲ್ಲದೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾದಂತಾಗಿದೆ.
ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಪ್ರಯೋಜನಗಳು
- ಈ ವಿದ್ಯಾಲಕ್ಷ್ಮಿ ಯೋಜನೆಯಡಿ, ವಿದ್ಯಾರ್ಥಿಗಳಿಗೆ ‘ಯಾವುದೇ ಮೇಲಾಧಾರ ಅಥವಾ ಗ್ಯಾರಂಟಿ ಇಲ್ಲದೇ’ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ.
- ಈ ಯೋಜನೆಯಡಿ ಪ್ರತಿ ವರ್ಷ ಗರಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲಾಗುತ್ತದೆ.
- ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು 10 ಲಕ್ಷದವರೆಗೆ ವಿದ್ಯಾರ್ಥಿ ಸಾಲ ಪಡೆಯಬಹುದು.
- ವಾಸ್ತವವಾಗಿ, 4.5 ಲಕ್ಷದವರೆಗೆ ಸಂಪೂರ್ಣ ಬಡ್ಡಿ ಸಹಾಯ ಧನವನ್ನು ಒದಗಿಸಲಾಗುತ್ತದೆ. ಅದರ ನಂತರ, ಸಾಲದ ಒಟ್ಟು ಮೊತ್ತವನ್ನು ಲೆಕ್ಕಿಸದೇ, ಅದರ ಮೇಲೆ ವಿಧಿಸಲಾದ ಬಡ್ಡಿಯನ್ನು 3 ಪ್ರತಿಶತದವರೆಗೆ ಸಬ್ಸಿಡಿ ಒದಗಿಸಲಾಗುತ್ತದೆ. ಹೆಣ್ಣು ಮಕ್ಕಳಿಗೂ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ.
- ಉತ್ತಮ ಪ್ರತಿಭೆಯಿದ್ದರೂ ಆರ್ಥಿಕ ತೊಂದರೆಯಿಂದ ಉನ್ನತ ಶಿಕ್ಷಣದಿಂದ ದೂರ ಉಳಿದಿರುವ ವಿದ್ಯಾರ್ಥಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.
- ಉನ್ನತ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಟಾಪ್-100 ಶ್ರೇಣಿಯ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ವಿದ್ಯಾಲಕ್ಷ್ಮಿ ಯೋಜನೆಯಡಿ ಸಾಲವನ್ನು ನೀಡಲಾಗುತ್ತದೆ. ಅಲ್ಲದೇ, ರಾಜ್ಯಗಳು/UTಗಳಲ್ಲಿ ಅಗ್ರ-200 ಶ್ರೇಯಾಂಕದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಸಹ ಈ ಯೋಜನೆಯಡಿ ಶಿಕ್ಷಣ ಸಾಲವನ್ನು ಪಡೆಯಬಹುದು.
ಯಾವ ಯಾವ ಕೋರ್ಸ್ಗಳಿಗೆ ಸಾಲ ಸೌಲಭ್ಯ:
ಈ ಯೋಜನೆಯಡಿಯಲ್ಲಿ ಇಂಟರ್, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಮೆಡಿಸಿನ್, ಪಿಜಿ ಡಿಪ್ಲೋಮಾ, ಸಿಎ, ವೃತ್ತಿಪರ ಕೋರ್ಸ್‌ಗಳು, ಐಐಎಂ, ಮ್ಯಾನೇಜ್‌ಮೆಂಟ್, ಐಐಟಿ, ವೃತ್ತಿಪರ ಶಿಕ್ಷಣ ಕೋರ್ಸ್‌ಗಳು ಇತ್ಯಾದಿ ಕ್ಷೇತ್ರಗಳಲ್ಲಿ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ನೀಡಲಾಗುತ್ತದೆ.
- ಅರ್ಹ ವಿದ್ಯಾರ್ಥಿಗಳು PM ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ಈ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು.
- ಅರ್ಹ ವಿದ್ಯಾರ್ಥಿಗಳಿಗೆ ಕೇವಲ 15 ದಿನಗಳಲ್ಲಿ ಶಿಕ್ಷಣ ನೀಡಲಾಗುವುದು.
- ಡೀಫಾಲ್ಟ್ ಆಗಿದ್ದಲ್ಲಿ ಶೇಕಡಾ 75 ರವರೆಗಿನ ಕ್ರೆಡಿಟ್ ಗ್ಯಾರಂಟಿ ಸಹ ಒದಗಿಸಲಾಗುತ್ತದೆ.
ವಿದ್ಯಾಲಕ್ಷ್ಮಿ ಸಾಲಗಳಿಗೆ ಅರ್ಜಿ ಹೀಗೆ ಸಲ್ಲಿಸಿ!
- ಮೊದಲು ನೀವು ವಿದ್ಯಾ ಲಕ್ಷ್ಮಿ ಪೋರ್ಟಲ್ ಗೆ ವಿಸಿಟ್ ಮಾಡಿ.
- ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ ಮತ್ತು ನೋಂದಾಯಿಸಿ.
- ಶಿಕ್ಷಣ ಸಾಲದ ಫಾರ್ಮ್ ಓಪನ್ ಮಾಡಿ, ಅದರಲ್ಲಿ ನಿಮ್ಮ ವೈಯಕ್ತಿಕ, ಶೈಕ್ಷಣಿಕ ಅರ್ಹತೆ ಮತ್ತು ಶ್ರೇಣಿಯ ವಿವರಗಳನ್ನು ನಮೂದಿಸಿ.
- ನಂತರದಲ್ಲಿ ಲಭ್ಯವಿರುವ ಸಾಲ ಯೋಜನೆಗಳು ಮತ್ತು ಅವುಗಳನ್ನು ನೀಡುವ ಬ್ಯಾಂಕ್‌ಗಳ ವಿವರಗಳ ಬಗ್ಗೆ ತಿಳಿದುಕೊಳ್ಳಿ
- ನಿಮಗಾಗಿ ಸೂಕ್ತವಾದ ಸಾಲ ಯೋಜನೆ ಮತ್ತು ಬ್ಯಾಂಕ್ ಆಯ್ಕೆಮಾಡಿ. ಒಂದು ಬಾರಿಗೆ ಗರಿಷ್ಠ 3 ಬ್ಯಾಂಕ್‌ಗಳನ್ನು ಆಯ್ಕೆ ಮಾಡಬಹುದು.
- ಬ್ಯಾಂಕ್‌ಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತದೆ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ 15 ದಿನಗಳಲ್ಲಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತವೆ.
- ನಿಮ್ಮ ಅರ್ಜಿಯನ್ನು ತಿರಸ್ಕರಿಸಿದರೆ, ಕಾರಣಗಳನ್ನು ತಿಳಿಸುವ ಮೇಲ್ ಅನ್ನು ನಿಮಗೆ ಕಳುಹಿಸಲಾಗುತ್ತದೆ.
ನಿಮ್ಮ ಗಮನದಲ್ಲಿರಲಿ: ಈ ಸಾಲಗಳ ಮೇಲಿನ ಬಡ್ಡಿ ದರಗಳು ಆಯಾ ಬ್ಯಾಂಕ್‌ಗಳನ್ನು ಅವಲಂಬಿಸಿ ಬದಲಾಗುತ್ತವೆ. ಆದರೆ, ನೀವು ಈ ಸಾಲಗಳನ್ನು EMI ಮೋಡ್‌ನಲ್ಲಿ ಮರುಪಾವತಿ ಮಾಡುತ್ತೀರಾ? ಅಥವಾ ಮೊರಾಟೋರಿಯಂ ವಿಧಾನದ ಮೂಲಕ ಉದ್ಯೋಗದ ನಂತರ ಪಾವತಿಸುವುದೇ? ಎಂಬುದನ್ನು ಮೊದಲೇ ತಿಳಿಸಬೇಕಾಗುತ್ತದೆ.
ದೇಶ
‘ನೀಟ್ ಅಕ್ರಮಕ್ಕೆ ಮೋದಿ-ಧರ್ಮೇಂದ್ರ ಪ್ರಧಾನ್ ಹೊಣೆ’: CM ಸಿದ್ದರಾಮಯ್ಯ
ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ NEET ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಪ್ರಧಾನಿ Narendra Modi ಹಾಗೂ ಕೇಂದ್ರ ಶಿಕ್ಷಣ ಸಚಿವ Dharmendra Pradhan ನೇರ ಹೊಣೆ ಹೊರಬೇಕು ಎಂದು ಮುಖ್ಯಮಂತ್ರಿ Siddaramaiah ಒತ್ತಾಯಿಸಿದರು.
ಬೆಂಗಳೂರಿನ Freedom Park ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, “ಈ ಹಿಂದೆ ರಾಜ್ಯಗಳು ತಮ್ಮದೇ CET ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿದ್ದರು. ಆದರೆ 2016ರಲ್ಲಿ ಮೋದಿ ಸರ್ಕಾರ ಬಲವಂತವಾಗಿ NEET ಜಾರಿಗೆ ತಂದ ಬಳಿಕ ಅಕ್ರಮಗಳು ಹೆಚ್ಚಾಗಿವೆ” ಎಂದು ಆರೋಪಿಸಿದರು.
“ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯ. ರಾಜ್ಯಗಳಿಗೆ ಸ್ವಾಯತ್ತತೆ ಇರಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡ ಪರಿಣಾಮ ಇಂತಹ ಹಗರಣಗಳು ಮರುಕಳಿಸುತ್ತಿವೆ” ಎಂದು ಅವರು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ವರ್ಷವಿಡೀ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ ಪೇಪರ್ ಲೀಕ್ ಮೂಲಕ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಿಎಂ, “ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹತಾಶರಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಬಿಜೆಪಿ ಆಡಳಿತದಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನೂ ಉಲ್ಲೇಖಿಸಿದರು. “ದೇಶದ ಯುವಜನತೆ ಆಕ್ರೋಶದಲ್ಲಿದ್ದರೂ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ” ಎಂದು ಟೀಕಿಸಿದರು.
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ದೊರೆಯುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ದೇಶ
ಸಿ.ಟಿ. ರವಿ ಎದುರೇ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಭಾರೀ ಘರ್ಷಣೆ
ಚಿಕ್ಕಮಗಳೂರು: ಜಿಲ್ಲೆಯ ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ರಾಜಕೀಯ ಘರ್ಷಣೆ ಸಂಭವಿಸಿದ್ದು, ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ C. T. Ravi ಅವರ ಸಮ್ಮುಖದಲ್ಲೇ ಈ ಗಲಾಟೆ ನಡೆದಿರುವುದು ವಿಶೇಷ ಗಮನ ಸೆಳೆದಿದೆ.
ಸಿ.ಟಿ. ರವಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಉಭಯ ಪಕ್ಷಗಳ ಬೆಂಬಲಿಗರು ಪರಸ್ಪರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪರಿಸ್ಥಿತಿ ಕೈಮೀರಿದ ಪರಿಣಾಮ ತಳ್ಳಾಟ-ನೂಕಾಟ ನಡೆಯಿತು.
ಮಾತಿನ ವಾಗ್ವಾದ ಹೆಚ್ಚಾಗುತ್ತಿದ್ದಂತೆ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು, ಸಿ.ಟಿ. ರವಿ ಅವರ ಸಮ್ಮುಖದಲ್ಲೇ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು.
ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಯಾವುದೇ ಅನಾಹುತ ಸಂಭವಿಸದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಘರ್ಷಣೆಯಿಂದ ಕೆಲಕಾಲ ರಾಂಪುರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರಾಜಕೀಯ ವೈಷಮ್ಯದ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲಾ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ನಿಗಾವಹಿಸಿದ್ದಾರೆ.
ದೇಶ
“ನಾವು ಯಾರೂ ಸುರಕ್ಷಿತರಲ್ಲ”: ಮುಂದಿನ ಮಹಾಮಾರಿಯ ಬಗ್ಗೆ ಜಾಗತಿಕ ವರದಿ ಆತಂಕ
ಕೊವಿಡ್ ಮಹಾಮಾರಿಯ ಆಘಾತದಿಂದ ಜಗತ್ತು ಇನ್ನೂ ಸಂಪೂರ್ಣ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಭೀಕರ ಸಾಂಕ್ರಾಮಿಕದ ಎಚ್ಚರಿಕೆ ಹೊರಬಿದ್ದಿದೆ. World Health Organization (WHO) ಹಾಗೂ ವಿಶ್ವ ಬ್ಯಾಂಕ್ ಬೆಂಬಲಿತ ಜಾಗತಿಕ ಸಿದ್ಧತಾ ಮೇಲ್ವಿಚಾರಣಾ ಮಂಡಳಿ (GPMB) ಬಿಡುಗಡೆ ಮಾಡಿರುವ ‘A World on the Edge’ ವರದಿ, “ಜಗತ್ತು ಮುಂದಿನ ಮಹಾಮಾರಿಯ ಅಂಚಿನಲ್ಲಿದೆ” ಎಂದು ಎಚ್ಚರಿಸಿದೆ.
ವರದಿಯ ಪ್ರಕಾರ, ಕೋವಿಡ್ ನಂತರ ಅಂತರರಾಷ್ಟ್ರೀಯ ಸಹಕಾರ ಕುಸಿದಿದ್ದು, ಲಸಿಕೆ ಹಂಚಿಕೆಯಲ್ಲಿ ತಾರತಮ್ಯ ಹೆಚ್ಚಾಗಿದೆ. ಇದೇ ಪರಿಸ್ಥಿತಿಯಲ್ಲಿ ಹೊಸ ವೈರಸ್ ಹರಡಿದರೆ, ಅದು ಕೋವಿಡ್‌ಗಿಂತಲೂ ಹೆಚ್ಚು ವಿನಾಶಕಾರಿ ಪರಿಣಾಮ ಉಂಟುಮಾಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೀಗ ಮಧ್ಯ ಆಫ್ರಿಕಾದ ಕಾಂಗೋ ಮತ್ತು ಉಗಾಂಡಾದಲ್ಲಿ ‘ಬುಂಡಿಬುಗ್ಯೋ’ ಎಂಬ ಅಪರೂಪದ ಎಬೋಲಾ ರೂಪಾಂತರ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಜೊತೆಗೆ Mpox ಪ್ರಕರಣಗಳು ಮತ್ತೆ ಹೆಚ್ಚುತ್ತಿದ್ದು, ಹಕ್ಕಿ ಜ್ವರ ಮತ್ತು ಹಂಟಾವೈರಸ್‌ಗಳಂತಹ ಸಾಂಕ್ರಾಮಿಕಗಳು ಯಾವುದೇ ಕ್ಷಣದಲ್ಲಿ ಜಾಗತಿಕ ಭೀತಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅರಣ್ಯ ನಾಶ ಮತ್ತು ಮಾನವ ವಸತಿ ವಿಸ್ತರಣೆಯಿಂದ ಪ್ರಾಣಿಗಳಲ್ಲಿರುವ ವೈರಸ್‌ಗಳು ಮನುಷ್ಯರಿಗೆ ಸುಲಭವಾಗಿ ಹರಡುತ್ತಿವೆ. ಅಂತರರಾಷ್ಟ್ರೀಯ ವಿಮಾನಯಾನ ಹೆಚ್ಚಿರುವುದರಿಂದ ಹೊಸ ವೈರಸ್ ಕೆಲವೇ ಗಂಟೆಗಳಲ್ಲಿ ವಿಶ್ವದಾದ್ಯಂತ ಹರಡುವ ಅಪಾಯವಿದೆ ಎಂದು ವರದಿ ಎಚ್ಚರಿಸಿದೆ.
ಕೋವಿಡ್ ಸಮಯದಲ್ಲಿ ಶ್ರೀಮಂತ ರಾಷ್ಟ್ರಗಳು ಲಸಿಕೆಗಳನ್ನು ಸಂಗ್ರಹಿಸಿಕೊಂಡಿದ್ದರೆ, ಬಡ ರಾಷ್ಟ್ರಗಳು ಔಷಧಕ್ಕಾಗಿ ಪರದಾಡಿದ್ದವು. ಈಗ ಎಂಪಾಕ್ಸ್ ಲಸಿಕೆಗಳ ವಿಷಯದಲ್ಲೂ ಇದೇ ಅಸಮಾನತೆ ಮರುಕಳಿಸಿದೆ ಎಂದು ವರದಿ ಟೀಕಿಸಿದೆ.
ತಜ್ಞರ ಪ್ರಕಾರ, ಕೃತಕ ಬುದ್ಧಿಮತ್ತೆ (AI) ವೈರಸ್ ಹರಡುವಿಕೆಯನ್ನು ಮುಂಚಿತವಾಗಿ ಪತ್ತೆಹಚ್ಚಲು ನೆರವಾಗಬಹುದು. ಆದರೆ ಇದೇ ತಂತ್ರಜ್ಞಾನ ತಪ್ಪು ಮಾಹಿತಿ ಹರಡುವ ಸಾಧನವಾಗುವ ಅಪಾಯವೂ ಇದೆ. ಭಾರತದಂತಹ ಹೆಚ್ಚು ಜನಸಂಖ್ಯೆ ಹಾಗೂ ಕಿಕ್ಕಿರಿದ ನಗರಗಳಿರುವ ದೇಶಗಳು ಭವಿಷ್ಯದ ಮಹಾಮಾರಿಗೆ ಹೆಚ್ಚು ತುತ್ತಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
-
ಕ್ರೀಡೆ8 hours agoಹಾಂಗ್ ಕಾಂಗ್ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್ಶಿಪ್ಗೆ ಕರ್ನಾಟಕದ ಇಬ್ಬರು ಆಯ್ಕೆ
-
ದೇಶ12 hours ago59 ವರ್ಷಗಳ ಬಳಿಕ ತಮಿಳುನಾಡು ಸಚಿವ ಸಂಪುಟಕ್ಕೆ ಕಾಂಗ್ರೆಸ್ ಎಂಟ್ರಿ! ಇಂದು ವಿಜಯ್ ಕ್ಯಾಬಿನೆಟ್ ವಿಸ್ತರಣೆ
-
ದೇಶ11 hours agoಬಿಜೆಪಿಗಿಂತ ವೇಗವಾಗಿ ಬೆಳೆದ ‘Cockroach Janta Party’!
-
ದೇಶ6 hours ago“ನಾವು ಯಾರೂ ಸುರಕ್ಷಿತರಲ್ಲ”: ಮುಂದಿನ ಮಹಾಮಾರಿಯ ಬಗ್ಗೆ ಜಾಗತಿಕ ವರದಿ ಆತಂಕ
-
ದೇಶ6 hours agoCockroach Janata Party ಖಾತೆ ತಡೆ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ
-
ಅಪರಾಧ10 hours agoLatest : ನಿಪ್ಪಾಣಿಯಲ್ಲಿ ಆಶ್ರಯ ಮನೆ ಹಂಚಿಕೆ ವೇಳೆ ಗಲಾಟೆ: ಕಣ್ಣೀರಿಟ್ಟ ಶಾಸಕಿ ಶಶಿಕಲಾ ಜೊಲ್ಲೆ
-
ದೇಶ10 hours agoಮೆಲೊಡಿ ಟ್ರೆಂಡ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ಜೋಡಿ: ಸೋನಾಕ್ಷಿ ವಿಡಿಯೋ ಸದ್ದು
-
ದೇಶ9 hours ago‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯಾದರೆ ₹7 ಲಕ್ಷ ಕೋಟಿ ಉಳಿತಾಯ: ಜೆಪಿಸಿ ಸಮಿತಿ
