Connect with us

ಆರೋಗ್ಯ

ಡೆಂಗ್ಯೂಗೆ ಗಾಬರಿಯಾಗಬೇಡಿ: ವೈದ್ಯರ ಈ ಸಲಹೆಗಳನ್ನು ಪಾಲಿಸಿ ನಿಮ್ಮ ರಕ್ತದ ಕಣಗಳನ್ನು ಕಾಪಾಡಿಕೊಳ್ಳಿ – Blood platelets

ಬೆಳಗಾವಿ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಪ್ರಾಮುಖ್ಯತೆ ಎಷ್ಟಿದೆಯೋ, ಅಷ್ಟೇ ಪ್ರಾಮುಖ್ಯತೆ ಬಿಳಿ ರಕ್ತ ಕಣಗಳಿಗೆ ಕೂಡ ಇದೆ. ಪ್ರಮುಖವಾಗಿ ದೇಹದ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಬಿಳಿ ರಕ್ತ ಕಣಗಳು ಹೊಂದಿದ್ದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇವುಗಳ ಪಾತ್ರ ಪ್ರಮುಖವಾಗಿದೆ. ಬಿಳಿ ರಕ್ತ ಕಣಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಜ್ಞ ವೈದ್ಯರು ಕೆಲವು ಸಲಹೆ ನೀಡಿದ್ದಾರೆ.

ಹೆದರಿಕೆ ಬೇಡ: ಬೆಳಗಾವಿ ಬಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಅಶೋಕಕುಮಾರ ಶೆಟ್ಟಿ ಈಟಿವಿ ಭಾರತ ಜೊತೆಗೆ ಮಾತನಾಡಿ, ”ಆರೋಗ್ಯವಂತ ವ್ಯಕ್ತಿಯಲ್ಲಿ 1.5 ದಿಂದ 3.5 ಲಕ್ಷದವರೆಗೆ ಪ್ಲೇಟ್ ಲೇಟ್ಸ್ ಇರುತ್ತವೆ. ಯಾವುದೇ ವ್ಯಕ್ತಿ ಡೆಂಗ್ಯೂ ಬಾಧಿತನಾದರೆ ಆತನ ದೇಹದಲ್ಲಿ ಬಿಳಿ ರಕ್ತಕಣಗಳು ಹಂತ ಹಂತವಾಗಿ ಕಡಿಮೆ ಆಗುತ್ತವೆ. ಇಂಥ ಸಂದರ್ಭದಲ್ಲಿ ಯಾರೂ ಗಾಬರಿ ಪಡುವ ಅವಶ್ಯಕತೆ ಇಲ್ಲ. ಹೈಡ್ರೇಶನ್ ಕಡಿಮೆ ಆಗದಂತೆ‌ ನೋಡಿಕೊಳ್ಳಬೇಕಷ್ಟೆ. ಕಿವಿ ಹಣ್ಣು ಮತ್ತು ಪಪ್ಪಾಯಿ ಹಣ್ಣು ಹೆಚ್ಚಿಗೆ ತಿಂದರೆ ರಕ್ತದ ಕಣಗಳು ಏರುತ್ತಾ ಹೋಗುತ್ತವೆ. ಇನ್ನು ಬಿಳಿ ರಕ್ತ ಕಣಗಳು ಕಡಿಮೆಯಾದರೆ ರಕ್ತಸ್ರಾವ ಆಗುತ್ತದೆ. ಬ್ರೆಶ್ ಮಾಡುವಾಗ ಹಲ್ಲಿನ ದವಡೆಯಲ್ಲಿ ರಕ್ತ ಬರುತ್ತದೆ. ಬಹಳ ಕಡಿಮೆಯಾದರೆ ದೇಹದ ಒಳಗೆ ರಕ್ತ ಸ್ರಾವವಾಗುವ ಸಾಧ್ಯತೆ ಇರುತ್ತದೆ. ಹಣ್ಣುಗಳನ್ನು ತಿಂದು ಹೈಡ್ರೇಶನ್ ಕಡಿಮೆ ಆಗದಂತೆ ಸರಿಯಾಗಿ ನೋಡಿಕೊಂಡರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ” ಎಂದು ವಿವರಿಸಿದರು.

”ಜಿಲ್ಲಾಸ್ಪತ್ರೆಯಲ್ಲಿ‌ ದಾಖಲಾಗುವ ರೋಗಿಗಳಿಗೆ ರಕ್ತದ ಕಣಗಳ ಅವಶ್ಯಕತೆ ಇದ್ದರೆ ಹಾಕುತ್ತಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಪೂರ್ಣ ಉಚಿತ ಮತ್ತು ಎಪಿಎಲ್ ಕಾರ್ಡ್ ಇದ್ದವರಿಗೆ ಸರ್ಕಾರದ ನಿಯಮಾನುಸಾರ ಕನಿಷ್ಠ ಶುಲ್ಕ ಪಡೆದು ರಕ್ತದ ಕಣಗಳನ್ನು ಹಾಕಲಾಗುತ್ತಿದೆ. ಶಿಬಿರಗಳಿಂದ ಸಂಗ್ರಹಿಸಿರುವ ರಕ್ತವನ್ನು ನಮ್ಮ ರಕ್ತ ಭಂಡಾರದಲ್ಲಿ ಶೇಖರಿಸಿಡುತ್ತೇವೆ. ಇದರಲ್ಲಿ ರಕ್ತದ ಕಣಗಳನ್ನು ಬೇರ್ಪಡಿಸಿಟ್ಟಿರುತ್ತೇವೆ. ಅವಶ್ಯಕತೆ ಇರುವ ರೋಗಿಗಳಿಗೆ ಅವುಗಳನ್ನು ಉಪಯೋಗಿಸುತ್ತೇವೆ. ಸದ್ಯಕ್ಕೆ ನಮ್ಮಲ್ಲಿ ರಕ್ತದ ಕಣಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯಯಿವೆ. ಹಾಗಾಗಿ, ಡೆಂಗ್ಯೂ ಹೆಚ್ಚಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್, ಔಷಧಿ ಸೇರಿ ಎಲ್ಲ ರೀತಿ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದು ಡಾ.ಅಶೋಕಕುಮಾರ ಶೆಟ್ಟಿ‌ ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ಈ ಆಹಾರ ಸೇವಿಸಿ: ಬಿಮ್ಸ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ವಿಠ್ಠಲ ವೆಂಕಪ್ಪ ಶಿಂಧೆ ಮಾತನಾಡಿ, ”ಜ್ವರ ಬಂದಾಗ ಯಾರೂ ಹೆದರಬಾರದು. ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು‌. ಕಿವಿ, ಪಪ್ಪಾಯಿ ಹಣ್ಣುಗಳನ್ನು ತಿನ್ನಬೇಕು. ಓಆರ್​ಎಸ್ ಸೇವಿಸಬೇಕು. ಇಲ್ಲದಿದ್ದರೆ, ನೀರಿನಲ್ಲಿ ಉಪ್ಪು, ಲಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ ಕುಡಿದರೆ ರಕ್ತದ ಕಣಗಳ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಸಲಹೆ ನೀಡಿದರು.

ಡಾ.ಸಿದ್ದಾರ್ಥ ನಿನ್ನೇಕರ್ ಸಲಹೆ: ಆಹಾರ, ಪೌಷ್ಟಿಕ, ಪ್ರಾಕೃತಿಕ ಚಿಕಿತ್ಸೆ ವೈದ್ಯ ಡಾ. ಸಿದ್ದಾರ್ಥ ನಿನ್ನೇಕರ್ ಪ್ರತಿಕ್ರಿಯಿಸಿ, ”ರಕ್ತದ ಕಣಗಳ ವೃದ್ಧಿಗೆ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಬೇಕು. ಉದಾಹರಣೆಗೆ ಪ್ರೊಟಿನ್ ಆಹಾರಗಳಾದ ಹಾಲು, ಮೊಸರು, ಮಜ್ಜಿಗೆ, ಮೊಳಕೆ ಕಾಳುಗಳು, ಪನ್ನೀರ, ಮೊಟ್ಟೆ, ಚಿಕನ್, ಫಿಶ್, ಪ್ರಾನ್ಸ್ ತಿನ್ನಬೇಕು. ವಿಟಮಿನ್ ಸಿ ಯುಕ್ತ ಕಿವಿ ಹಣ್ಣು, ಲಿಂಬು, ಸಂತ್ರಾ, ಮೊಸಂಬಿ, ಅನಾನಸ್ ತಿನ್ನಬೇಕು. ವಿಟಮಿನ್ ಎ ಪಪ್ಪಾಯಿ, ಮಾವಿನಹಣ್ಣು, ಗಜ್ಜರಿ(ಬೀಟಾ ಕೆರೊಟಿನ್), ಬಿ ಕಾಂಪ್ಲೇಕ್ಸ್ ಯುಕ್ತ ಹಸಿರು ಸೊಪ್ಪು ತರಕಾರಿ, ಮಟನ್ ಲೀವರ್ ನಂಥ ಆಹಾರಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಡೆಂಗ್ಯೂ ವೈರಸ್ ನಿಯಂತ್ರಿಸಲು ಸಹಾಯಕಾರಿಯಾಗಿದೆ. ಇದರ ಜೊತೆಗೆ ಪಪ್ಪಾಯಿ ಎಲೆ, ವೀಟ್ ಗ್ರಾಸ್ (ಗೋಧಿಯ ಹಸಿರು ಎಲೆ), ಕುಂಬಳಕಾಯಿ ಬೀಜ, ಅಲೊವೇರಾ ಬಳಸುವುದು ಸೂಕ್ತ” ಎಂದು ಸಲಹೆ ನೀಡಿದರು.

ಆರೋಗ್ಯ

LIFE STYLE ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ?

ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ನಾವು ಅನೇಕ ಸಣ್ಣ ಅಭ್ಯಾಸಗಳನ್ನು ಗಮನಿಸದೆ ನಿರ್ಲಕ್ಷಿಸುತ್ತೇವೆ. ಅದರಲ್ಲಿ ಪ್ರಮುಖವಾದುದು ನಿಂತುಕೊಂಡು ನೀರು ಕುಡಿಯುವ ಅಭ್ಯಾಸ. ಕಚೇರಿಯಾಗಲಿ, ಮನೆಯಲ್ಲಾಗಲಿ ಅಥವಾ ಹೊರಗಡೆ ಇದ್ದಾಗಲೂ ಜನರು ನಿಂತೆಯೇ ನೀರು ಕುಡಿಯುತ್ತಾರೆ. ಆದರೆ ಈ ಸಣ್ಣ ಅಭ್ಯಾಸವೇ ಭವಿಷ್ಯದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಆಯುರ್ವೇದದ ಎಚ್ಚರಿಕೆ.

ನಾವು ಕುಳಿತುಕೊಂಡು ನೀರು ಕುಡಿದಾಗ ದೇಹವು ಅದನ್ನು ನಿಧಾನವಾಗಿ ಹೀರಿಕೊಳ್ಳಲು ಅವಕಾಶ ದೊರಕುತ್ತದೆ. ಇದರಿಂದ ನೀರು ದೇಹದ ಅಂಗಾಂಗಗಳಿಗೆ ಸಮರ್ಪಕವಾಗಿ ವಿತರಣೆ ಆಗುತ್ತದೆ. ಆದರೆ ನಿಂತುಕೊಂಡು ನೀರು ಕುಡಿಯುವಾಗ ನೀರು ವೇಗವಾಗಿ ಹೊಟ್ಟೆಗೆ ಸೇರುತ್ತದೆ. ಇದರಿಂದ ದೇಹವು ಅದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದೆ, ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ಆಯುರ್ವೇದದ ಪ್ರಕಾರ, ನಿಂತು ನೀರು ಕುಡಿಯುವುದರಿಂದ ದೇಹದ ನೀರಿನ ಸಮತೋಲನ ಹಾಳಾಗುತ್ತದೆ. ಪರಿಣಾಮವಾಗಿ ನೀರು ಕೀಲುಗಳು ಮತ್ತು ಮೊಣಕಾಲುಗಳ ಸುತ್ತ ಸಂಗ್ರಹವಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮೊಣಕಾಲು ನೋವು, ಕೀಲು ಬಿಗಿತ ಮತ್ತು ಸಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇನ್ನೂ, ನಿಂತು ನೀರು ಕುಡಿಯುವುದರಿಂದ ನೀರು ಸರಿಯಾಗಿ ಶೋಧನೆ ಆಗದೆ ನೇರವಾಗಿ ಮೂತ್ರಪಿಂಡಗಳಿಗೆ ತಲುಪುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.

ಜೀರ್ಣಕ್ರಿಯೆ ಹದಗೆಡುವುದರಿಂದ ಗ್ಯಾಸ್, ಆಮ್ಲೀಯತೆ, ಎದೆಯುರಿ, ಮಲಬದ್ಧತೆ ಹಾಗೂ ಹೊಟ್ಟೆ ಭಾರವಾದ ಅನುಭವ ಉಂಟಾಗುತ್ತದೆ. ದೇಹವು ನೀರನ್ನು ಸರಿಯಾಗಿ ಬಳಸಿಕೊಳ್ಳದಾಗ ಶಕ್ತಿ ಕುಂಠಿತವಾಗುತ್ತದೆ ಮತ್ತು ವ್ಯಕ್ತಿಗೆ ನಿರಂತರ ದಣಿವು ಹಾಗೂ ಆಲಸ್ಯ ಕಾಣಿಸಿಕೊಳ್ಳುತ್ತದೆ.

ಆರೋಗ್ಯವಾಗಿರಲು ಬಯಸಿದರೆ ಯಾವಾಗಲೂ ಆರಾಮವಾಗಿ ಕುಳಿತು, ನಿಧಾನವಾಗಿ ನೀರು ಕುಡಿಯಬೇಕು. ತುಂಬಾ ತಣ್ಣನೆಯ ನೀರನ್ನು ತಪ್ಪಿಸಿ, ಕೋಣೆಯ ಉಷ್ಣಾಂಶದ ನೀರನ್ನು ಗಾಜು ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading

Blog

ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಗೆ ಯುವಕ ಬಲಿ

ಶಿವಮೊಗ್ಗ, ಜನವರಿ 29: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಸಿ ತೋಟ ಗ್ರಾಮದಲ್ಲಿ ಮಂಗನ ಕಾಯಿಲೆ (KFD – Kyasanur Forest Disease) ಸೋಂಕಿಗೆ ಮತ್ತೊಂದು ಬಲಿ ಬಿದ್ದಿದೆ. 29 ವರ್ಷದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಸಸಿ ತೋಟ ನಿವಾಸಿ ಕಿಶೋರ್ ಎಂದು ಗುರುತಿಸಲಾಗಿದೆ. ಜನವರಿ 20ರಿಂದ ಕಿಶೋರ್ ಅವರಿಗೆ ತೀವ್ರ ಜ್ವರ, ತಲೆನೋವು, ದೇಹದ ನೋವು ಸೇರಿದಂತೆ ಮಂಗನ ಕಾಯಿಲೆಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಜ್ವರ ತಗ್ಗದೆ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.

ರೋಗಲಕ್ಷಣಗಳು ಉಲ್ಬಣಗೊಂಡ ಹಿನ್ನೆಲೆ ಜನವರಿ 25ರಂದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿದರೂ, ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಕಿಶೋರ್ ಚಿಕಿತ್ಸೆಗೇ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಘಟನೆ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ತೀರ್ಥಹಳ್ಳಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಮಂಗನ ಕಾಯಿಲೆ ಟಿಕ್‌ (Tick) ಮೂಲಕ ಹರಡುವ ಸೋಂಕಾಗಿರುವುದರಿಂದ ಅರಣ್ಯ ಪ್ರದೇಶಕ್ಕೆ ತೆರಳುವವರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅರಣ್ಯ ಅಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಮತ್ತು ಅರಣ್ಯಕ್ಕೆ ಹೋಗುವ ಕೂಲಿ ಕಾರ್ಮಿಕರು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಜ್ವರ, ತಲೆನೋವು, ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

Continue Reading

ಆರೋಗ್ಯ

EGG HEALTH BENIFITS : ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಏನು ಲಾಭ?

ಆರೋಗ್ಯ ಡೆಸ್ಕ್: ಮೊಟ್ಟೆ (Egg) ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಲಭ್ಯವಿರುವ ಆಹಾರಗಳಲ್ಲಿ ಒಂದಾಗಿದೆ. ಆದರೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಎಂಬ ಗೊಂದಲ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಅತಿಯಾದ ಮೊಟ್ಟೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ್ದರಿಂದ ಸರಿಯಾದ ಪ್ರಮಾಣ ತಿಳಿದುಕೊಳ್ಳುವುದು ಬಹಳ ಮುಖ್ಯ.

ಹಾರ್ವರ್ಡ್ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳೊಂದಿಗೆ ಕಾರ್ಯನಿರ್ವಹಿಸುವ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಅನ್ನು ಹೊಂದಿದ್ದು, ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿವೆ. ಇದರಿಂದ ಸ್ನಾಯುಗಳ ನಿರ್ಮಾಣ ಮತ್ತು ಪುನರ್ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಜಿಮ್‌ಗೆ ಹೋಗುವವರಿಗೆ ಇದು ಅತ್ಯುತ್ತಮ ಮತ್ತು ಕಡಿಮೆ ವೆಚ್ಚದ ಆಹಾರವಾಗಿದೆ.

ಡಾ. ಸೇಥಿ ಅವರು ಹಸಿ ಮೊಟ್ಟೆ ಸೇವನೆ ತಪ್ಪಿಸಬೇಕು ಎಂದು ಎಚ್ಚರಿಸಿದ್ದಾರೆ. ಹಸಿ ಮೊಟ್ಟೆಗಳಿಂದ ಸಾಲ್ಮೊನೆಲ್ಲಾ ಸೋಂಕಿನ ಅಪಾಯವಿದ್ದು, ಬೇಯಿಸಿದ ಮೊಟ್ಟೆಗಳಲ್ಲಿ ಇರುವ ಪ್ರೋಟೀನ್ ದೇಹಕ್ಕೆ ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಮೊಟ್ಟೆಗಳು ವಿಟಮಿನ್ ಎ, ಡಿ, ಇ, ಬಿ12 ಹಾಗೂ ಕಬ್ಬಿಣ, ಸೆಲೆನಿಯಮ್, ರಂಜಕದಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಮೊಟ್ಟೆಯ ಹಳದಿ ಭಾಗದಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣುಗಳ ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ವಯಸ್ಸಿನ ಪರಿಣಾಮದಿಂದ ಉಂಟಾಗುವ ದೃಷ್ಟಿ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಸಾಮಾನ್ಯವಾಗಿ, ಪ್ರತಿದಿನ 1 ರಿಂದ 2 ಮೊಟ್ಟೆಗಳನ್ನು ಸೇವಿಸುವುದು ಹೆಚ್ಚಿನ ಜನರಿಗೆ ಸುರಕ್ಷಿತ ಎಂದು ಡಾ. ಸೌರಭ್ ಸೇಥಿ ಹೇಳಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವಿಸಿದರೆ ತೂಕ ನಿಯಂತ್ರಣ, ಹೃದಯ ಆರೋಗ್ಯ ಮತ್ತು ಒಟ್ಟಾರೆ ದೈಹಿಕ ಕ್ಷೇಮಕ್ಕೆ ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Continue Reading

Trending