Connect with us

ರಾಜಕೀಯ

ಮುಂಗಾರು ಅಧಿವೇಶನ: ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ – BPL Card

ಬೆಂಗಳೂರು: 1.73 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇದ್ದು ಆದಷ್ಟು ಬೇಗ ಈ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಸರ್ಕಾರದ ಅಂತ್ಯದಲ್ಲಿ 2.95 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇತ್ತು. ಅದರಲ್ಲಿ ನಾವು ಪರಿಶೀಲಿಸಿದ್ದು, ಅರ್ಜಿ ಸಲ್ಲಿಸಿದವರಲ್ಲಿ 236162 ಅರ್ಹರಿದ್ದು, ಬಾಕಿ 56930 ಅರ್ಜಿದಾರರು ಬಿಪಿಎಲ್ ಕೆಳಗೆ ಬರಲ್ಲ. ಅರ್ಹರಲ್ಲಿ 62 ಸಾವಿರ ಕಾರ್ಡ್ ಗಳನ್ನು ಈಗಾಗಲೇ ಪಟ್ಟಿಗೆ ತಂದು ದವಸ ಧಾನ್ಯ ಕೊಡಲಾಗುತ್ತಿದೆ. ಬಾಕಿ ಕಾರ್ಡ್​ಗಳ ಪರಿಶೀಲಿಸುತ್ತಿದ್ದು, ಬಾಕಿ ಇರುವ 1.73 ಲಕ್ಷ ಕಾರ್ಡ್​ದಾರರಿಗೂ ಆದಷ್ಟು ಬೇಗ ಪಡಿತರ ವಿತರಿಸಲಾಗುತ್ತದೆ ಎಂದರು.

ಆರೋಗ್ಯ ಸಂಬಂಧಿ ಚಿಕಿತ್ಸೆ ಪಡೆಯಲು ಪಡಿತರ ಕಾರ್ಡ್ ವಿತರಿಸಲು ಕಾಲಮಿತಿ ಇಲ್ಲ. ವಾರದಲ್ಲಿ ಕಾರ್ಡ್ ವಿತರಿಸಲಾಗುತ್ತದೆ. ಈವರೆಗೂ ಎಪಿಎಲ್ ಮತ್ತು ಬಿಪಿಎಲ್ ಸೇರಿ 4 ಕೋಟಿ ಜನರ ಮೀರಿ ಅಧಿಕ ಕಾರ್ಡ್​ಗಳ ವಿತರಣೆ ಮಾಡಿದ್ದೇವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೇ ಅರ್ಜಿ ಸಲ್ಲಿಸುತ್ತಿದ್ದಂತೆ ಕೂಡಲೇ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಅನ್ನಭಾಗ್ಯ, ಅಕ್ಷರ ಭಾಗ್ಯದ ಅಕ್ಕಿ ಖರೀದಿ ದರ ವ್ಯತ್ಯಾಸಕ್ಕೆ ಸರ್ಕಾರ ನೀಡಿದ ಕಾರಣವೇನು?; ಅಕ್ಷರ ದಾಸೋಹಕ್ಕೆ ರಾಜ್ಯದ ಟೆಂಡರ್ ಅನ್ನಭಾಗ್ಯಕ್ಕೆ ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಮಾಡುತ್ತಿರುವ ಹಿನ್ನೆಲೆ ಖರೀದಿ ದರದಲ್ಲಿ ವ್ಯತ್ಯಾಸವಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ‌ ಸದಸ್ಯ ರವಿಕುಮಾರ್ ಅಕ್ಷರ ದಾಸೋಹಕ್ಕೆ 29.30 ರೂ.ಗೆ ಕೆಜಿ ಅಕ್ಕಿ ಶಿಕ್ಷಣ ಇಲಾಖೆ ಖರೀದಿಸುತ್ತಿದೆ. ಮುನಿಯಪ್ಪ ಅವರು 34.60 ರೂ.ಗೆ ಖರೀದಿಸಿತ್ತಿದ್ದಾರೆ. 5.5 ರೂ. ವ್ಯತ್ಯಾಸವಾಗಿದೆ. ಈ ಹಣ ವ್ಯತ್ಯಾಸ ಯಾಕೆ, ಎಲ್ಲಿ ಹೋಗುತ್ತಿದೆ, ಹೆಚ್ಚುವರಿ ಹಣ ಯಾಕೆ ಕೊಡಲಾಗುತ್ತಿದೆ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ಕೇಂದ್ರಕ್ಕೆ ಸೇರಿದ ಎರಡು ಸಂಸ್ಥೆಗಳಿಂದಲೇ ಅಕ್ಕಿ ಖರೀದಿ ಮಾಡಲಾಗುತ್ತಿದೆ. ಪಾರದರ್ಶಕವಾಗಿ ಖರೀದಿಸಿದೆ. ಅನ್ನಭಾಗ್ಯಕ್ಕೆ ನಮಗೆ ಹೆಚ್ಚುವರಿ ಅಕ್ಕಿ ಕೇಂದ್ರ ಕೊಡಲಿಲ್ಲ. ನಂತರ ನಾವು ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಮೂಲಕವೇ ಖರೀದಿಸುತ್ತಿದ್ದೇವೆ. ಎ.ಗ್ರೇಡ್ ರಾರೈಸ್ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಎನ್​ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ್ ಸಂಸ್ಥೆಗಳಿಂದಲೇ ನಾವು ಅಕ್ಕಿ ಖರೀದಿಸುತ್ತಿದ್ದೇವೆ. ನಾವು ಟೆಂಡರ್ ಕೂಡ ಕರೆಯದೇ ಕೇಂದ್ರದ ಸಂಸ್ಥೆಗಳಿಂದಲೇ ಖರೀದಿ ಮಾಡಿ ವಿತರಿಸುತ್ತಿದ್ದೇವೆ ಎಂದರು.

ಇದಕ್ಕೆ ತೃಪ್ತರಾಗದ ರವಿಕುಮಾರ್, ಅನ್ನಭಾಗ್ಯಕ್ಕೆ ಹೆಚ್ಚಿನ‌ದರ ನೀಡಿ ಎ ಗ್ರೇಡ್ ಖರೀದಿಸಿದರೆ ಮಕ್ಕಳಿಗೆ ಯಾವ ಗುಣಮಟ್ಟದ ಅಕ್ಕಿ ಖರೀದಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಅಕ್ಕಿ ಕೊಡಲಾಗುತ್ತಿದೆ. ನಾವು ಕೊಡುತ್ತಿರುವ ವ್ಯವಸ್ಥೆ ಬೇರೆ. ನಾವು ಟೆಂಡರ್ ಕರೆದು ಕೊಡುತ್ತಿದ್ದೇವೆ ಎಂದರು. ನಂತರ ಮಾತನಾಡಿದ ಮುನಿಯಪ್ಪ, ಈ ವ್ಯತ್ಯಾಸಕ್ಕೆ ಕಾರಣ ಕೇಂದ್ರ ಸರ್ಕಾರ. ಮಾರುಕಟ್ಟೆ ದರ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅದಕ್ಕಾಗಿ ನಾವು ಕೇಂದ್ರ ಭಂಡಾರದಿಂದ ಏಕರೂಪ ದರಕ್ಕೆ ಖರೀದಿ ಮಾಡುತ್ತಿದ್ದೇವೆ ಎಂದರು.

ಈ ವೇಳೆ ಸ್ಪಷ್ಟ ಉತ್ತರಕ್ಕೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಕೊಡಿ, ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಎಂದು ಚರ್ಚೆಗೆ ತೆರೆ ಎಳೆದರು.

ಬೆಂಗಳೂರು

ಅಗಸ್ಟ್ 10 ರಂದು ಬೆಂಗಳೂರು ಮೆಟ್ರೋ ಫೇಸ್-3 ಶಂಕುಸ್ಥಾಪನೆ: ಪ್ರಧಾನಿ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಮತ್ತೊಂದು ಸಿಹಿ ಸುದ್ದಿ. ಬೆಂಗಳೂರು ಮೆಟ್ರೋ ಫೇಸ್-3 ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಕಟಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 10ರಂದು ಪ್ರಧಾನಿ ಮೋದಿ ಮೆಟ್ರೋ ಯೆಲ್ಲೋ ಲೈನ್ ಅನ್ನು ಉದ್ಘಾಟಿಸುವುದರ ಜೊತೆಗೆ ಜೆಪಿ ನಗರ ವೆಗಾಸಿಟಿ ಮಾಲ್‌ನಿಂದ ಕಡಬಗೆರೆವರೆಗೆ ವಿಸ್ತರಿಸಲಾಗಿರುವ ಮೆಟ್ರೋ ಮಾರ್ಗದ ಶಂಕುಸ್ಥಾಪನೆ ಕಾರ್ಯವನ್ನು ಸಹ ನೆರವೇರಿಸಲಿದ್ದಾರೆ,” ಎಂದು ಹೇಳಿದರು.

ಈ ಯೋಜನೆಯು ಸುಮಾರು ₹17,000 ಕೋಟಿ ವೆಚ್ಚದ ಫೇಸ್-3 ಯೋಜನೆಯ ಭಾಗವಾಗಿದೆ. ಮೊದಲೇ ಯೆಲ್ಲೋ ಲೈನ್ ಶಂಕುಸ್ಥಾಪನೆಗೆ ಮೋದಿ ಅವರೇ ಆಗಿದ್ದರೆ, ಈಗ ಉದ್ಘಾಟನೆಯ ಗೌರವವೂ ಅವರಿಗೇ ಸಲ್ಲಲಿದೆ.

ಡಿಸಿಎಂ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ:
ಡಿಸಿಎಂ ಡಿ.ಕೆ. ಶಿವಕುಮಾರ್ ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾತ್ರವಿದೆ ಎಂದು ಹೇಳಿರುವುದರ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸುತ್ತಾ, “ಇದುವರೆಗೆ ಈ ಯೋಜನೆಯ ಬಗ್ಗೆ ಯಾವ ರಾಜ್ಯ ಸಚಿವರೂ ಚಿಂತೆ ಮಾಡಿಲ್ಲ. ಪ್ರಧಾನಿ ಬರುವ ಸುದ್ದಿ ತಿಳಿಯುತ್ತಿದ್ದಂತೆ ಕ್ರೆಡಿಟ್ ಕಳಿಸಲು ಮುಂದಾಗಿದ್ದಾರೆ,” ಎಂದು ಟೀಕಿಸಿದರು.

ಫ್ಲೈಓವರ್ ಪ್ರಗತಿಯ ಮೇಲೂ ಟೀಕೆ:
“ಈಜಿಪುರದ 2.5 ಕಿ.ಮೀ ಫ್ಲೈಓವರ್‌ನ್ನು ಎಂಟು ವರ್ಷಗಳಿಂದ ಪೂರ್ಣಗೊಳಿಸಲಾಗಿಲ್ಲ. ಅದರೆ ಇದೀಗ 100 ಕಿ.ಮೀ ರಸ್ತೆಗಳ ಯೋಜನೆ ಪ್ರಾರಂಭಿಸಿದ್ದಾರೆ,” ಎಂದು ಹೇಳಿದ್ದಾರೆ.

ಮೆಟ್ರೋ ಯೋಜನೆಗೆ ಹಿಂದೆ ಸರ್ಕಾರದ ಕೊಡುಗೆ:
ಕೊರೋನಾ ಸಮಯದಲ್ಲೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳು ಅನುದಾನ ಒದಗಿಸಿ ಕೆಲಸ ಮುಂದುವರೆದಿದ್ದವು. ಆದರೆ ಇದೀಗ ಎಂಡಿ ನೇಮಕ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

Continue Reading

ರಾಜಕೀಯ

ಮಾಜಿ ಡಿಸಿಎಂ ಈಶ್ವರಪ್ಪ ಮತ್ತೆ ಭಾರೀ ವಾಗ್ದಾಳಿ: ಯಡಿಯೂರಪ್ಪ ಕುಟುಂಬ, ಬಿಜೆಪಿಗೆ ತೀವ್ರ ಕಿಡಿ

ಬಳ್ಳಾರಿ:
ಬಿಜೆಪಿಯಿಂದ ಉಚ್ಚಾಟನೆಯಾದ ನಂತರ ಸೈಲೆಂಟ್ ಆಗಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೆ ಸುದ್ದಿಯಲ್ಲಿ ಮೂಡಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನದು ಭಾರತೀಯ ಬಿಜೆಪಿಯ ಟೀಮ್, ಯಾವುದೇ ಗುಂಪಿನೊಂದಿಗೆ ನಾನು ಹೋಗುವುದಿಲ್ಲ. ಆದರೆ ಬಿಜೆಪಿ ಶುದ್ಧೀಕರಣಗೊಳ್ಳಬೇಕು ಎಂಬುದು ಎಲ್ಲರ ಅಭಿಪ್ರಾಯ. ಅದು ನನ್ನದು ಸಹ ಆಗಿದೆ,” ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಶ್ವರಪ್ಪನ ಈ ಹೇಳಿಕೆ ಕೇಸರಿಪಾಳ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಅನೇಕ ನಾಯಕರು ಈಶ್ವರಪ್ಪನ ನೇರ ಭಾಷೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಯಡಿಯೂರಪ್ಪನ ಕುಟುಂಬದ ಮದುವೆಯಲ್ಲಿ ಭಾಗವಹಿಸಿದ ಈಶ್ವರಪ್ಪ:
ಇತ್ತೀಚೆಗೆ ಈಶ್ವರಪ್ಪ ಯಡಿಯೂರಪ್ಪನ ಮೊಮ್ಮಗನ ಮದುವೆಯಲ್ಲಿ ಭಾಗವಹಿಸಿ ಎಲ್ಲರಿಗೂ ಆಶ್ಚರ್ಯ ತಂದಿದ್ದರು. ಈ ಘಟನೆಯ ಬಳಿಕ ಅವರು ಮತ್ತೆ ಪಕ್ಷದ ಪರ ನಿಂತು ಮಾತನಾಡಿದ್ದಾರೆ.

ಎಫ್‌ಐಆರ್ ದಾಖಲು:
ಇದಕ್ಕೂ ಮಿಕ್ಕಿ, ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಕೇಸ್ ದಾಖಲಾಗಿದೆ.

ಅದಕ್ಕೂ ಹಿಂದಿನ ಘಟನೆಗಳು:
ಈ ಪ್ರಕರಣ ಸಂಬಂಧ ಕಳೆದ ಏಪ್ರಿಲ್‌ನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತರಿಗೆ ವರದಿ ಸಲ್ಲಿಸಲು ಸೂಚಿಸಿತ್ತು. ಇದೀಗ ಖಾಸಗಿ ವಕೀಲ ವಿನೋದ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Continue Reading

ರಾಜಕೀಯ

ಮತಗಳ್ಳತನದ ದಾಖಲೆ ಬಿಡುಗಡೆಗೆ ರಾಹುಲ್ ಗಾಂಧಿ ಸಜ್ಜು: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್ ಯಾವತ್ತೂ “ಹಿಟ್ ಅಂಡ್ ರನ್” ರಾಜಕೀಯ ಮಾಡಲ್ಲ, ಎಲ್ಲದಕ್ಕೂ ದಾಖಲಾತಿಗಳಿವೆ. ಕರ್ನಾಟಕದಲ್ಲಿ ನಡೆದ ಮತಗಳ್ಳತನದ ಬಗ್ಗೆ ದಾಖಲೆಗಳನ್ನು ರಾಹುಲ್ ಗಾಂಧಿ ಬಹಿರಂಗಪಡಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, “ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಮೂಲಕ ಮತಗಳ್ಳತನದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಆ.8 ರಂದು ಇದೇ ಕುರಿತು ಕರ್ನಾಟಕದಲ್ಲಿಯೂ ಸಾಕ್ಷ್ಯ ಬಿಡುಗಡೆ ಮಾಡಲಾಗುತ್ತದೆ” ಎಂದು ಹೇಳಿದರು.

ಇದೊಂದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗ ಯಾರ ನಿಯಂತ್ರಣದಲ್ಲಿದೆ ಎಂಬುದನ್ನು ಜನತೆಯೇ ನಿರ್ಧರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

BJP ಪ್ರತಿಕ್ರಿಯೆ ಬಗ್ಗೆ ಖರ್ಗೆ ಪ್ರತಿಸ್ಪಂದನೆ:

“ನಾವು ಆರೋಪವನ್ನೇ ಮಾಡಿಲ್ಲ. documentation ಇದೆ, ಅದನ್ನೇ ತೋರಿಸುತ್ತಿದ್ದೇವೆ. ಬಿಜೆಪಿಯವರು ಏಕೆ ಎಲ್ಲಾ ಸಂಸ್ಥೆಗಳ ವಕ್ತಾರರಂತೆ ಮಾತನಾಡುತ್ತಿದ್ದಾರೆ? ಆಯಾ ಸಂಸ್ಥೆಗಳಿಗೆ ತಮ್ಮದೇ ಆದ ವಕ್ತಾರರು ಇದ್ದಾರೆ, ಅವರು ಸ್ಪಷ್ಟನೆ ನೀಡಲಿ,” ಎಂದು ತೀವ್ರ ಟೀಕೆ ಮಾಡಿದರು.

Continue Reading

Trending