Connect with us

ಬೆಂಗಳೂರು

ಬೆಂಗಳೂರು TO ಮೈಸೂರು ಪಾದಯಾತ್ರೆ: ‘ದೋಸ್ತಿ’ಗಳಿಂದ ಕಾಂಗ್ರೆಸ್ ವಿರುದ್ಧ ಬೃಹತ್ ಹೋರಾಟಕ್ಕೆ ಸಿದ್ಧತೆ – BJP JDS Padayatra

ಬೆಂಗಳೂರು: ಮುಡಾ ಹಗರಣ ಹಾಗು ವಾಲ್ಮೀಕಿ ನಿಗಮ ಹಗರಣಗಳನ್ನು ಜನರ ಮುಂದಿಡಲು ಬಿಜೆಪಿ ನಿರ್ಧರಿಸಿದ್ದು, ದೋಸ್ತಿ ಪಕ್ಷ ಜೆಡಿಎಸ್ ಜೊತೆಗೂಡಿ ಬೆಂಗಳೂರು ಟು ಮೈಸೂರು ಪಾದಯಾತ್ರೆಗೆ ಮುಂದಾಗಿದೆ. ಒಂದೂವರೆ ದಶಕದ ನಂತರ ರಾಜ್ಯದಲ್ಲಿ ಮೊದಲ ಬೃಹತ್ ರಾಜಕೀಯ ಹೋರಾಟದ ಪಾದಯಾತ್ರೆ ನಡೆಯುತ್ತಿದೆ.

ಮುಡಾ ಹಾಗು ವಾಲ್ಮೀಕಿ ನಿಗಮ ಹಗರಣ ಕುರಿತು ಸದನದಲ್ಲಿ ಚರ್ಚೆಗೆ ಸರಿಯಾದ ವೇದಿಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿದೆ. ಬೃಹತ್ ಪಾದಯಾತ್ರೆ ಮೂಲಕ ಜನರಿಗೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ. ಅದಕ್ಕಾಗಿ 140 ಕಿಲೋಮೀಟರ್​ಗಳ ಬೃಹತ್ ಪಾದಯಾತ್ರೆಗೆ ನಿರ್ಧರಿಸಲಾಗಿದೆ.

ಬೆಂಗಳೂರು ಹೊರವಲಯದ ನೈಸ್​ ರೋಡ್ ಜಂಕ್ಷನ್​ನಿಂದ ಪಾದಯಾತ್ರೆ ಆರಂಭಿಸಿ ಬಿಡದಿ, ರಾಮನಗರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಮೂಲಕ ಮೈಸೂರಿಗೆ ಸಾಗಲು ಬಿಜೆಪಿ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಕೇವಲ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಾಗದೆ ಪ್ರಮುಖ ಪಟ್ಟಣಗಳ ಒಳಹಾದಿ ಮೂಲಕ‌ ಸಾಗಿ ಜನರನ್ನು ತಲುಪಬೇಕು. ಅಲ್ಲಲ್ಲಿ ಸಮಾವೇಶಗಳನ್ನು ಆಯೋಜನೆ ಮಾಡುವ ಮೂಲಕ ಸರ್ಕಾರದ ಹಗರಣಗಳನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡಬೇಕು ಎಂದು ನಿರ್ಧರಿಸಿದ್ದು, ಅದಕ್ಕಾಗಿ ರೂಪುರೇಶೆ ಸಿದ್ದಪಡಿಸಲಾಗುತ್ತಿದೆ. ಯಾವ ಮಾರ್ಗದ ಮೂಲಕ ಸಾಗಬೇಕು. ಯಾವ ಪಟ್ಟಣದಲ್ಲಿ ಒಳಗೆ ಸಾಗಬೇಕು. ಸಮಾವೇಶಗಳು ಎಲ್ಲಿ ನಡೆಸಬೇಕು. ಮೈಸೂರಿನಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ಬೃಹತ್ ಪ್ರಮಾಣದಲ್ಲಿ ನಡೆಸುವ ಕುರಿತು ಅಂತಿಮ ಹಂತದ ಪರಿಶೀಲನೆಗಳು ನಡೆಯುತ್ತಿದೆ.

ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ಸಾಗುವ ಇಡೀ ಮಾರ್ಗ ಜನತಾದಳದ ಕಾರಿಡಾರ್ ಆಗಿದೆ. ದಳಪತಿಗಳ ಕೋಟೆಯೊಳಗೆ ಕೇಸರಿ ಪಡೆ ನಡೆಸುತ್ತಿರುವ ಪಾದಯಾತ್ರೆ ಇದಾಗಿದೆ. ಜೆಡಿಎಸ್ ಈಗ ಎನ್​ಡಿಎ ಭಾಗವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪಾದಯಾತ್ರೆಯಲ್ಲಿ ಜನತಾದಳ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗುತ್ತಿದೆ. ಜನತಾದಳದ ವಿಶ್ವಾಸದೊಂದಿಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಇದು ಬಿಜೆಪಿಯ ಸಂಘಟಿತ ಕೇಡರ್ ಬೇಸ್ ಅಲ್ಲದ ಭಾಗವಾಗಿರುವ ಕಾರಣ ಪಾದಯಾತ್ರೆ ಕಳೆಗುಂದದಿರಲು ಜೆಡಿಎಸ್​ನ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ. ಪಾದಯಾತ್ರೆ ಮಾರ್ಗದುದ್ದಕ್ಕೂ ಸ್ಥಳೀಯ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡು ಪಾದಯಾತ್ರೆಯನ್ನು ಸಫಲಗೊಳಿಸಬೇಕು ಎಂದು ನಿರ್ಧರಿಸಿದ್ದು, ಇದಕ್ಕಾಗಿ ಬೂತ್ ಮಟ್ಟದ ಸಿದ್ದತೆಗಳು ಆರಂಭವಾಗಿವೆ. ಉಭಯ ಪಕ್ಷಗಳ ವಿಧಾನಸಭಾವಾರು ನಾಯಕರು ಸಮ್ಮಿಳಿತ ರೀತಿಯಲ್ಲಿ ಕಾರ್ಯಕರ್ತರ ಪಡೆಯನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿರ್ಧಾರ ಮಾಡಲಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವ ನಿರ್ಧಾರ ಮಾಡಿದ್ದರೂ ದಿನಾಂಕವನ್ನು ಅಂತಿಮಗೊಳಿಸಿಲ್ಲ. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿದ್ದು, ದೆಹಲಿಯಲ್ಲಿರುವ ಹಿನ್ನೆಲೆ ಅವರೊಂದಿಗೆ ಚರ್ಚಿಸಲು ಸಾಧ್ಯವಾಗದ ಕಾರಣದಿಂದ ದಿನಾಂಕ ನಿಗದಿ ಬಾಕಿ ಉಳಿದಿದೆ. ಶನಿವಾರ ಹಾಗು ಭಾನುವಾರ ರಾಜ್ಯಕ್ಕೆ ಕುಮಾರಸ್ವಾಮಿ ಆಗಮಿಸಲಿಸಿದ್ದು, ಕುಮಾರಸ್ವಾಮಿ ಉಪಸ್ಥಿತಿಯಲ್ಲಿಯೇ ಉಭಯ ಪಕ್ಷಗಳ ನಾಯಕರು ಜಂಟಿ ಸಭೆ ನಡೆಸಿ ಪಾದಯಾತ್ರೆ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 28 ರಂದು ಎನ್.ಡಿ.ಎ ಸಭೆ ನಡೆಸಿ ಪಾದಯಾತ್ರೆ ದಿನಾಂಕ ಹಾಗು ಮಾರ್ಗ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿ ಉಭಯ ಪಕ್ಷಗಳ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದರೂ ಬಿಜೆಪಿ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ,‌ ಡಿಸಿ ಸದಾನದಗೌಡ, ಜಗದೀಶ್ ಶೆಟ್ಟರ್ ಸಾಂಕೇತಿಕವಾಗಿ ಪಾಲ್ಗೊಂಡು ಸಮಾವೇಶಗಳಲ್ಲಿ ಉಪಸ್ಥಿತರಿರುವಂತೆ ಮಾಡುವ ಲೆಕ್ಕಾಚಾರ ಇದೆ. ಇನ್ನು ಜೆಡಿಎಸ್​ನಿಂದ ಕುಮಾರಸ್ವಾಮಿ ಸಂಸತ್ ಅಧಿವೇಶನದ ಕಾರಣದಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿದ್ದು, ಅವರು ಉದ್ಘಾಟಣೆ, ಸಮಾರೋಪದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಅದು ಕೂಡು ಭಾನುವಾರದ ಸಭೆಯಲ್ಲಿ ಅಂತಿಮವಾಗಲಿದೆ.

2010 ರಲ್ಲಿ ಅಕ್ರಮ ಗಣಿಗಾರಿಕೆ ವಿರೋಧಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದಂತೆ ಈಗ ಬಿಜೆಪಿ ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿದೆ. ಇದು 14 ವರ್ಷದ ನಂತರ ನಡೆಯುತ್ತಿರುವ ರಾಜ್ಯದ ಬೃಹತ್ ರಾಜಕೀಯ ಪಾದಯಾತ್ರೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ವೇಳೆ ಕಾಂಗ್ರೆಸ್ ಕಾವೇರಿ ಸಂಗಮದಿಂದ ಮೇಕೆದಾಟು ಪಾದಯಾತ್ರೆ ನಡೆಸಿತ್ತಾದರೂ ಇದು ನೂರು ಕಿಲೋಮೀಟರ್​ಗೂ ಹೆಚ್ಚಿನ ದೂರ ಕ್ರಮಿಸುವ ಬೃಹತ್ ಪಾದಯಾತ್ರೆಯಾಗಿದೆ.

ಕೇವಲ ಪಾದಯಾತ್ರೆ ನಡೆಸಿ ಸುಮ್ಮನಾಗದೆ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು, ಸಿಎಂ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ಒಂದಲ್ಲಾ ಒಂದು ರೀತಿಯ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ಉಭಯ ಪಕ್ಷಗಳು ನಿರ್ಧರಿಸಿವೆ. ಹಾಗಾಗಿ ಪಾದಯಾತ್ರೆ ಹೋರಾಟದ ಆರಂಭ ಮಾತ್ರವಾಗಿದ್ದು, ಸಿಎಂ ರಾಜೀನಾಮೆವರೆಗೂ ನಿರಂತರ ಹೋರಾಟ ಇರಲಿವೆ. ಈ ಕುರಿತು ಬಿಜೆಪಿ ನಾಯಕ ಸಿಟಿ ರವಿ ಮಾಹಿತಿ ನೀಡಿದ್ದು, ಹಗರಣ ಆರೋಪದ ವಿಷಯಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಸದನದ ಒಳಗೆ ಮುಡಾ, ವಾಲ್ಮೀಕಿ ಹಗರಣ ಹೋರಾಟ ನಡೆಸಿರುವ ಬಿಜೆಪಿ ಜೆಡಿಎಸ್ ದೋಸ್ತಿಗಳು ಇದೀಗ ಸದನದ ಹೊರಗೆ ಪಾದಯಾತ್ರೆ ಮೂಲಕ ಬೃಹತ್ ಹೋರಾಟಕ್ಕೆ ನಿರ್ಧರಿಸಿವೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ದನೆಗೂ ಈ ಪಾದಯಾತ್ರೆ ಸಹಕಾರಿಯಾಗಲಿದ್ದು, ಮಿತ್ರಪಕ್ಷಗಳ ಒಗ್ಗಟ್ಟು ಬಲಗೊಳ್ಳಲಿದೆ ಎನ್ನುವ ವಿಶ್ವಾಸ ಉಭಯ ನಾಯಕರದ್ದಾಗಿದೆ.

ಬೆಂಗಳೂರು

ಅಗಸ್ಟ್ 10 ರಂದು ಬೆಂಗಳೂರು ಮೆಟ್ರೋ ಫೇಸ್-3 ಶಂಕುಸ್ಥಾಪನೆ: ಪ್ರಧಾನಿ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಮತ್ತೊಂದು ಸಿಹಿ ಸುದ್ದಿ. ಬೆಂಗಳೂರು ಮೆಟ್ರೋ ಫೇಸ್-3 ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಕಟಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 10ರಂದು ಪ್ರಧಾನಿ ಮೋದಿ ಮೆಟ್ರೋ ಯೆಲ್ಲೋ ಲೈನ್ ಅನ್ನು ಉದ್ಘಾಟಿಸುವುದರ ಜೊತೆಗೆ ಜೆಪಿ ನಗರ ವೆಗಾಸಿಟಿ ಮಾಲ್‌ನಿಂದ ಕಡಬಗೆರೆವರೆಗೆ ವಿಸ್ತರಿಸಲಾಗಿರುವ ಮೆಟ್ರೋ ಮಾರ್ಗದ ಶಂಕುಸ್ಥಾಪನೆ ಕಾರ್ಯವನ್ನು ಸಹ ನೆರವೇರಿಸಲಿದ್ದಾರೆ,” ಎಂದು ಹೇಳಿದರು.

ಈ ಯೋಜನೆಯು ಸುಮಾರು ₹17,000 ಕೋಟಿ ವೆಚ್ಚದ ಫೇಸ್-3 ಯೋಜನೆಯ ಭಾಗವಾಗಿದೆ. ಮೊದಲೇ ಯೆಲ್ಲೋ ಲೈನ್ ಶಂಕುಸ್ಥಾಪನೆಗೆ ಮೋದಿ ಅವರೇ ಆಗಿದ್ದರೆ, ಈಗ ಉದ್ಘಾಟನೆಯ ಗೌರವವೂ ಅವರಿಗೇ ಸಲ್ಲಲಿದೆ.

ಡಿಸಿಎಂ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ:
ಡಿಸಿಎಂ ಡಿ.ಕೆ. ಶಿವಕುಮಾರ್ ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾತ್ರವಿದೆ ಎಂದು ಹೇಳಿರುವುದರ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸುತ್ತಾ, “ಇದುವರೆಗೆ ಈ ಯೋಜನೆಯ ಬಗ್ಗೆ ಯಾವ ರಾಜ್ಯ ಸಚಿವರೂ ಚಿಂತೆ ಮಾಡಿಲ್ಲ. ಪ್ರಧಾನಿ ಬರುವ ಸುದ್ದಿ ತಿಳಿಯುತ್ತಿದ್ದಂತೆ ಕ್ರೆಡಿಟ್ ಕಳಿಸಲು ಮುಂದಾಗಿದ್ದಾರೆ,” ಎಂದು ಟೀಕಿಸಿದರು.

ಫ್ಲೈಓವರ್ ಪ್ರಗತಿಯ ಮೇಲೂ ಟೀಕೆ:
“ಈಜಿಪುರದ 2.5 ಕಿ.ಮೀ ಫ್ಲೈಓವರ್‌ನ್ನು ಎಂಟು ವರ್ಷಗಳಿಂದ ಪೂರ್ಣಗೊಳಿಸಲಾಗಿಲ್ಲ. ಅದರೆ ಇದೀಗ 100 ಕಿ.ಮೀ ರಸ್ತೆಗಳ ಯೋಜನೆ ಪ್ರಾರಂಭಿಸಿದ್ದಾರೆ,” ಎಂದು ಹೇಳಿದ್ದಾರೆ.

ಮೆಟ್ರೋ ಯೋಜನೆಗೆ ಹಿಂದೆ ಸರ್ಕಾರದ ಕೊಡುಗೆ:
ಕೊರೋನಾ ಸಮಯದಲ್ಲೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳು ಅನುದಾನ ಒದಗಿಸಿ ಕೆಲಸ ಮುಂದುವರೆದಿದ್ದವು. ಆದರೆ ಇದೀಗ ಎಂಡಿ ನೇಮಕ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

Continue Reading

ಅಪರಾಧ

Breaking News ಚಾಲಕ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಸಂಸದ ಡಾ. ಸುಧಾಕರ್ ಹೆಸರು ಉಲ್ಲೇಖ!

ಚಿಕ್ಕಬಳ್ಳಾಪುರ, ಆಗಸ್ಟ್ 7 – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೈನಂದಿನ ಶಾಂತಿಯನ್ನು ಬೆಚ್ಚಿಬೀಳಿಸುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಜಿಲ್ಲಾ ಪಂಚಾಯತ್ ಕಚೇರಿಯ ಆವರಣದಲ್ಲಿ 33 ವರ್ಷದ ಗುತ್ತಿಗೆ ಚಾಲಕ ಬಾಬು ಎಂ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೋಕಾಂತರವಾಗಿದೆ.

ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಹೆಸರು:
8 ವರ್ಷಗಳಿಂದ ಲೆಕ್ಕಪರಿಶೋಧನೆ ವಿಭಾಗದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಬಾಬು, ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಹಾಗೂ ಅವರ ಬೆಂಬಲಿಗರಾದ ನಾಗೇಶ್ ಮತ್ತು ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವೆನಿಸಿದ ಹಣಕಾಸು ವಂಚನೆ:
ಬಾಬು ಅವರು ಡೆತ್ ನೋಟ್‌ನಲ್ಲಿ, ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಬಾಬು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಕಚೇರಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು:
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ FIR ದಾಖಲಾತಿ ನಡೆಯುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.

Continue Reading

ಬೆಂಗಳೂರು

ಬೆಂಗಳೂರಿನಲ್ಲಿ ವಸತಿ ಯೋಜನೆಗಳ ಅವ್ಯವಸ್ಥೆ: ಹೊಸ ಯೋಜನೆಗಳ ಬಗ್ಗೆ ಶಾಸಕ ಎಸ್.ಟಿ. ಸೋಮಶೇಖರ್ ಅಸಮಾಧಾನ

ಬೆಂಗಳೂರು, ಆಗಸ್ಟ್ 7 – ನಗರದಲ್ಲಿ ಈಗಿನ ವಸತಿ ಯೋಜನೆಗಳು ಪೂರ್ಣವಾಗಿಲ್ಲದಿರುವಾಗ ಹೊಸ ಭೂಸ್ವಾಧೀನ ಅಧಿಸೂಚನೆಗಳನ್ನು ನೀಡುವುದು ಅರ್ಥವಿಲ್ಲ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಕಿಡಿಕಾರಿದರು.

ಯಶವಂತಪುರ ಕ್ಷೇತ್ರದ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ಬರಾಯನಪಾಳ್ಯ ಎ ಹಾಗೂ ಬಿ ಗ್ರಾಮಗಳಲ್ಲಿ ಹೊಸ ಅಂಗನವಾಡಿ ಕಟ್ಟಡ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಲೋಕಾರ್ಪಣೆ ವೇಳೆ ಅವರು ಮಾತನಾಡಿದರು.

ಅವರು ಅಭಿಪ್ರಾಯಪಟ್ಟ ಪ್ರಮುಖ ವಿಷಯಗಳು:

  • ಬೆಂಗಳೂರಿನ ಜನಸಂಖ್ಯೆ ಈಗಾಗಲೇ 1.5 ಕೋಟಿಗೂ ಮೀರುತ್ತಿದೆ.
  • ವಸತಿ ಸಮುಚ್ಛಯಗಳಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಬಾಕಿಯಿವೆ.
  • ಕುಡಿಯುವ ನೀರಿನ ಕೊರತೆ, ಒಳಚರಂಡಿ ಸಮಸ್ಯೆ, ರಾಜಕಾಲುವೆಗಳ ಉಕ್ಕಿಹರಿವು ನಗರದ ಮುಖ್ಯ ಸಮಸ್ಯೆಗಳಾಗಿವೆ.
  • ಕೆಲ ಕಟ್ಟಡಗಳು ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿದ್ದು, ಸೋರಿಕೆ ಸಮಸ್ಯೆ ಜನರನ್ನು ಕಾಡುತ್ತಿದೆ.
  • “ಕಟ್ಟಡ ಕುಸಿದು ಅನಾಹುತವಾದರೆ ಹೊಣೆ ಯಾರು?” ಎಂದು ಅವರು ಪ್ರಶ್ನಿಸಿದರು.

ಬೇರೆ ಪ್ರಮುಖ ಅಂಶಗಳು:
ನಗರದ ವಾಹನ ಸಂಚಾರ ದಟ್ಟಣೆ, ನಿಯಂತ್ರಣ ತಪ್ಪಿದ ನಗರ ವಿಸ್ತರಣೆ, ಮೂಲಸೌಕರ್ಯದ ಕೊರತೆ ಇವುಗಳಿಂದ ನಾಗರಿಕರು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಹೊರಗೆ ಹೊಸ ವಸತಿ ಯೋಜನೆಗಳನ್ನು ರೂಪಿಸಿ ಮೂಲಸೌಕರ್ಯ ಒದಗಿಸಿದರೆ ಜನಸಂದಣಿ ನಿಯಂತ್ರಣ ಸಾಧ್ಯವೆಂದು ಶಾಸಕ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಾಜರಿದ್ದವರು:
ಪಂಚಾಯತ್ ಅಧ್ಯಕ್ಷೆ ಹೇಮಾ ನಾರಾಯಣ್, ಸದಸ್ಯರು ಸದಾನಂದ.ಡಿ, ಎನ್.ಕುಮಾರ್, ರೇವಣಸಿದ್ದಯ್ಯ, ಅಶ್ವತ್, ವೆಂಕಟಾಚಲ, ಸುನಿಲ್, ಪುಟ್ಟಮಲ್ಲು, ತಾತಪ್ಪ, ಶಿವಣ್ಣ, ಹನುಮಂತ ಹಾಗೂ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

Trending