Connect with us

ಬೆಂಗಳೂರು

ಮಾನವ-ಆನೆ ಸಂಘರ್ಷ ರಾಜ್ಯವೊಂದರ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ: ಸಚಿವ ಈಶ್ವರ್ ಖಂಡ್ರೆ – Minister Ishwar Khandre

Published

on

ಬೆಂಗಳೂರು: “ಮಾನವ-ಆನೆ ಸಂಘರ್ಷ ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ. ಬದಲಾಗಿ ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಅರಣ್ಯ ಇಲಾಖೆಯು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಈ ಸಮ್ಮೇಳನದ ವಿಷಯವೇ ಒಂದು ಮಹತ್ವದ ಸವಾಲನ್ನು ಪ್ರಚುರಪಡಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ. ಕರ್ನಾಟಕ ರಾಜ್ಯ ವೈವಿಧ್ಯಮಯ ಜೀವವೈವಿಧ್ಯ, ಸಸ್ಯ ಸಂಪತ್ತು, ಪ್ರಾಣಿ ಸಂಪತ್ತಿನಿಂದ ಕೂಡಿದೆ. ವಿಶಾಲವಾದ ದಟ್ಟ ಅಡವಿಗಳು, ಪ್ರಾಣಿ ಸಂಕುಲ, ಸಸ್ಯ ಸಂಕುಲ, ಕೀಟ ಸಂಕುಲ ಮತ್ತು ಪಕ್ಷಿ ಸಂಕುಲಕ್ಕೆ ನೆಲೆಯಾಗಿದೆ. ಕರ್ನಾಟಕದಲ್ಲಿ ಸುಮಾರು 43,382 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಅಂದರೆ ನಮ್ಮ ಭೌಗೋಳಿಕ ಭೂಭಾಗದ ಶೇ.22ರಷ್ಟು ಹಸಿರು ಹೊದಿಕೆ ಇದೆ” ಎಂದು ಮಾಹಿತಿ ನೀಡಿದರು.

ರಾಜ್ಯದ ಅರಣ್ಯವನ್ನು ಜೀವನ ಮತ್ತು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳೂ ಇವೆ. ಕಾಡು ಎಂದರೆ ಕೇವಲ ಮರ, ಗಿಡ, ಪ್ರಾಣಿ, ಪಕ್ಷ ಅಷ್ಟೇ ಅಲ್ಲ. ಕಾಡು ಈ ಭೂ ಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು. ನಮಗೆ ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ. ಅರಣ್ಯಗಳು ನಾನಾ ರೂಪದಲ್ಲಿ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷ ಅನುಕೂಲತೆ ಕಲ್ಪಿಸಿವೆ. ಕರ್ನಾಟಕದಲ್ಲಿ, ಈ ನೈಸರ್ಗಿಕ ಸಂಪನ್ಮೂಲಗಳ ನಿರ್ಣಾಯಕ ಮಹತ್ವವನ್ನು ನಾವು ಗುರುತಿಸಿದ್ದೇವೆ ಮತ್ತು ಅವುಗಳ ರಕ್ಷಣೆ ಮತ್ತು ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ” ಎಂದರು.

ಆನೆ ಸಂಖ್ಯೆಯಲ್ಲಿ ರಾಜ್ಯ ಪ್ರಥಮ: “ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದು, ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ, ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿದೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದರು.

ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಪ್ರತಿಯೊಂದು ಜೀವವೂ ಅಮೂಲ್ಯ. ಈ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿ” ಎಂದು ಆಶಿಸಿದರು.

ಆದಿವಾಸಿಗಳ ಕೊಡುಗೆ ಅಪಾರ: “ಮಾನವ-ವನ್ಯಜೀವಿ ಸಂಘರ್ಷದಲ್ಲಿ, ಮಾನವ-ಆನೆ ಸಂಘರ್ಷವೇ ದೊಡ್ಡ ಸವಾಲು. ಹೆಚ್ಚುತ್ತಿರುವ ಮಾನವ ಜನಸಂಖ್ಯೆ, ಕಾಡಂಚಿನವರೆಗೆ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳು ಮತ್ತು ವಸತಿ ಬಡಾವಣೆ ನಿರ್ಮಾಣ ಮಾನವ-ಆನೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ.” ಎಂದು ಆತಂಕ ವ್ಯಕ್ತಪಡಿಸಿದರು.

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವುದು ನಮ್ಮ ಆದ್ಯತೆ: “ಮಾನವ-ವನ್ಯಜೀವಿ ಸಂಘರ್ಷ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಮೊದಲ ಆದ್ಯತೆ. ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸಲು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಕರ್ನಾಟಕ ರಾಜ್ಯವು ಈ ಸವಾಲನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ” ಎಂದರು.

“ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ಮುಖ್ಯಮಂತ್ರಿಯವರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದರು. ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಿಮಗೆಲ್ಲ ಆಶ್ಚರ್ಯ ಆಗಬಹುದು ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ” ಎಂದು ವಿವರಿಸಿದರು.

ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಕೇರಳ, ತಮಿಳುನಾಡು ಮತ್ತು ಒಡಿಶಾದ ಅರಣ್ಯ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ದೇಶ

MLA ವಾಹನ ಬಳಕೆಗೆ ಹೊಸ ನಿಯಮ ಜಾರಿ; ವೇತನ, ಪಿಂಚಣಿಯಿಂದಲೇ ಶುಲ್ಕ ಕಡಿತ!

Published

on

ಬೆಂಗಳೂರು, ಜು.8: ಶಾಸಕರ ಭವನದಲ್ಲಿರುವ ಸರ್ಕಾರಿ ವಾಹನಗಳ ದುರುಪಯೋಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ವಿಧಾನಸಭಾ ಸಚಿವಾಲಯ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಜನಪ್ರತಿನಿಧಿಗಳ ಆಪ್ತ ಸಹಾಯಕರು, ಬೆಂಬಲಿಗರು ಅಥವಾ ಅತಿಥಿಗಳು ಶಿಫಾರಸು ಪತ್ರದ ಆಧಾರದ ಮೇಲೆ ಸರ್ಕಾರಿ ವಾಹನಗಳನ್ನು ಪಡೆದು ಬೆಂಗಳೂರು ನಗರದ ಹೊರಗೆ ಸಂಚರಿಸಲು ಅವಕಾಶ ಇರುವುದಿಲ್ಲ.

ಹೊಸ ಮಾರ್ಗಸೂಚಿಯ ಪ್ರಕಾರ, ಶಾಸಕರ ಭವನದ ಸರ್ಕಾರಿ ವಾಹನಗಳ ಸಂಚಾರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ತುರ್ತು ಪರಿಸ್ಥಿತಿ ಅಥವಾ ವಿಮಾನ ನಿಲ್ದಾಣಕ್ಕೆ ತೆರಳುವಂತಹ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಬೆಂಗಳೂರಿನ ಗಡಿ ದಾಟಬೇಕಾದರೆ ವಿಧಾನಸಭಾಧ್ಯಕ್ಷರ ಲಿಖಿತ ಅನುಮತಿ ಕಡ್ಡಾಯವಾಗಲಿದೆ.

ವಿಧಾನಸಭಾ ಸಚಿವಾಲಯದ ಮಾಹಿತಿ ಪ್ರಕಾರ, ಸೀಮಿತ ಸಂಖ್ಯೆಯ ವಾಹನಗಳು ಮತ್ತು ಚಾಲಕರ ಲಭ್ಯತೆಯಿಂದಾಗಿ ಹಲವು ಬಾರಿ ಹಾಲಿ ಶಾಸಕರಿಗೂ ತುರ್ತು ಸಂದರ್ಭದಲ್ಲಿ ವಾಹನ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಸಮಸ್ಯೆ ನಿವಾರಣೆ ಹಾಗೂ ಸಾರ್ವಜನಿಕ ಆಸ್ತಿಯ ಸಮರ್ಪಕ ಬಳಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನೊಂದು ಪ್ರಮುಖ ಬದಲಾವಣೆಯಾಗಿ, ನಗದುರಹಿತ (Cashless) ವಸೂಲಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ವಾಹನ ಸಂಚರಿಸಿದ ಪ್ರತಿ ಕಿಲೋಮೀಟರ್‌ಗೆ ನಿಗದಿಪಡಿಸಿದ ಶುಲ್ಕವನ್ನು ಹಾಲಿ ಶಾಸಕರ ವೇತನದಿಂದ ಹಾಗೂ ಮಾಜಿ ಶಾಸಕರ ಪಿಂಚಣಿಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ.

ಈ ವ್ಯವಸ್ಥೆಯಿಂದ ಶಾಸಕರ ಹೆಸರಿನಲ್ಲಿ ಯಾರು ಸರ್ಕಾರಿ ವಾಹನ ಬಳಸಿದ್ದಾರೆ ಎಂಬ ಸಂಪೂರ್ಣ ದಾಖಲೆ ಲಭ್ಯವಾಗಲಿದ್ದು, ಪಾರದರ್ಶಕತೆ ಹೆಚ್ಚುವ ಜೊತೆಗೆ ಸಾರ್ವಜನಿಕ ಹಣದ ದುರುಪಯೋಗಕ್ಕೂ ಪರಿಣಾಮಕಾರಿ ತಡೆ ಬೀಳಲಿದೆ ಎಂದು ವಿಧಾನಸಭಾ ಸಚಿವಾಲಯ ತಿಳಿಸಿದೆ. ಹೊಸ ನಿಯಮಗಳು ಸರ್ಕಾರಿ ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಆಡಳಿತದಲ್ಲಿ ಉತ್ತರದಾಯಿತ್ವ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

Continue Reading

ದೇಶ

‘ಟೀಮ್ ಬೆಂಗಳೂರು ಅಲ್ಲ, ಟೀಮ್ ಕರ್ನಾಟಕ’ : ಜಾಗತಿಕ ಹೂಡಿಕೆದಾರರಿಗೆ ಡಿಕೆ ಶಿವಕುಮಾರ್ ಮಹತ್ವದ ಸಂದೇಶ

Published

on

ಬೆಂಗಳೂರು, ಜು.8: ಕರ್ನಾಟಕವನ್ನು ಜಾಗತಿಕ ಹೂಡಿಕೆ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಜಾಗತಿಕ ಹೂಡಿಕೆದಾರರ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಇದು ಕೇವಲ ಟೀಮ್ ಬೆಂಗಳೂರು ಅಲ್ಲ, ಟೀಮ್ ಕರ್ನಾಟಕ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ” ಎಂದು ಹೇಳಿದರು.

ಸುಮಾರು 200ಕ್ಕೂ ಹೆಚ್ಚು ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ (GCC) ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಅಭಿವೃದ್ಧಿ, ಕೈಗಾರಿಕಾ ವಿಸ್ತರಣೆ ಹಾಗೂ ಭವಿಷ್ಯದ ಹೂಡಿಕೆಗಳ ಕುರಿತು ಸರ್ಕಾರಕ್ಕೆ ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ ಎಂದು ಸಿಎಂ ತಿಳಿಸಿದರು. ಜಾಗತಿಕ ಕಂಪನಿಗಳು ಸರ್ಕಾರದ ಆಡಳಿತದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವುದು ಸಂತಸದ ವಿಷಯ ಎಂದರು.

‘Beyond Bengaluru’ ಯೋಜನೆಯಡಿ ಐಟಿ-ಬಿಟಿ ಹಾಗೂ ಕೈಗಾರಿಕೆಗಳನ್ನು ಬೆಂಗಳೂರಿನ ಹೊರಗಿನ 2-Tier ಮತ್ತು 3-Tier ನಗರಗಳಿಗೆ ವಿಸ್ತರಿಸಲು ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದೆ. ಈ ಪ್ರದೇಶಗಳಲ್ಲಿ ಉದ್ಯಮ ಆರಂಭಿಸುವ ಕಂಪನಿಗಳಿಗೆ ಕಡಿಮೆ ದರದಲ್ಲಿ ಜಾಗ, ಕಟ್ಟಡ ಹಾಗೂ ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನೂ ಸಿಎಂ ನೀಡಿದರು.

ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಹೂಡಿಕೆದಾರರನ್ನು ರಾಜ್ಯದ ಎಲ್ಲ ಭಾಗಗಳಿಗೆ ಆಕರ್ಷಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಉದ್ಯೋಗ ಸೃಷ್ಟಿಗೆ ಸಹಕರಿಸುವ ಕೈಗಾರಿಕೆಗಳಿಗೆ ಅಗತ್ಯ ಸಬ್ಸಿಡಿ ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ಸರ್ಕಾರ ನೀಡಲಿದೆ ಎಂದರು.

ಇದೇ ವೇಳೆ, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರುವ ಉದ್ದೇಶದಿಂದ ಅತ್ಯಾಧುನಿಕ AI University ಸ್ಥಾಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ವಿಶ್ವವಿದ್ಯಾಲಯದ ರೂಪುರೇಷೆಗಳ ಕುರಿತು ಜಾಗತಿಕ ತಂತ್ರಜ್ಞಾನ ತಜ್ಞರು ಹಾಗೂ GCC ಮುಖ್ಯಸ್ಥರಿಂದ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Continue Reading

ದೇಶ

Karnataka SIR : ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸುಳ್ಳು ಮಾಹಿತಿ? ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು ಸಲ್ಲಿಕೆ

Published

on

ಬೆಂಗಳೂರು, ಜು.8: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಸುಳ್ಳು ಹಾಗೂ ದಾರಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಬಿಜೆಪಿ, ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಅಧಿಕೃತ ದೂರು ಸಲ್ಲಿಸಿದೆ.

ಬಿಜೆಪಿ ನೀಡಿರುವ ದೂರಿನಲ್ಲಿ, ಭಾರತೀಯ ಚುನಾವಣಾ ಆಯೋಗವು ಸಂವಿಧಾನದ ವಿಧಿ 324ರ ಅಡಿಯಲ್ಲಿ ಸ್ಥಾಪಿತವಾದ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಷ್ಕರಣೆ ಅದರ ಕಾನೂನುಬದ್ಧ ಕರ್ತವ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 15ರ ಅನ್ವಯ ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರ ಆಯೋಗಕ್ಕಿದೆ ಎಂದು ತಿಳಿಸಲಾಗಿದೆ.

ಬಿಜೆಪಿ ಪ್ರಕಾರ, ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯನ್ನು ತಡೆಯುವುದು, ಮೃತಪಟ್ಟವರ ಹೆಸರನ್ನು ತೆಗೆದುಹಾಕುವುದು ಹಾಗೂ ಅನರ್ಹ ವ್ಯಕ್ತಿಗಳ ಹೆಸರು ಸೇರ್ಪಡೆಯಾಗದಂತೆ ನೋಡಿಕೊಳ್ಳುವುದಾಗಿದೆ.

ಆದರೆ ಕಾಂಗ್ರೆಸ್, ಬಿಜೆಪಿ ಪ್ರೇರಣೆಯಿಂದಲೇ SIR ಪ್ರಕ್ರಿಯೆ ನಡೆಯುತ್ತಿದೆ ಎಂದು ಕರಪತ್ರಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಆರೋಪ ಮಾಡುತ್ತಿದೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ. ಚುನಾವಣಾ ಆಯೋಗವು ಬಿಜೆಪಿ ಜೊತೆಗೂಡಿ ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿದೆ ಎಂಬ ಆರೋಪವು ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಬಿಜೆಪಿ ವಾದಿಸಿದೆ.

ಇಂತಹ ಸುಳ್ಳು ಮಾಹಿತಿಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗುವ ಸಾಧ್ಯತೆ ಇದ್ದು, ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಚುನಾವಣಾ ಸಿಬ್ಬಂದಿಯ ಸುರಕ್ಷತೆಗೂ ಅಪಾಯ ಎದುರಾಗಬಹುದು ಎಂದು ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, SIR ಪ್ರಕ್ರಿಯೆಗೆ ಅಡ್ಡಿಪಡಿಸದಂತೆ ಚುನಾವಣಾ ಆಯೋಗ ಕ್ರಮ ವಹಿಸಬೇಕೆಂದು ಬಿಜೆಪಿ ತನ್ನ ದೂರಿನಲ್ಲಿ ಆಗ್ರಹಿಸಿದೆ.

ಸೂಚನೆ: ಈ ಆರೋಪಗಳು ಬಿಜೆಪಿಯ ದೂರಿನಲ್ಲಿರುವ ಅಂಶಗಳಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ.

Continue Reading

Trending