ಬೆಂಗಳೂರು
2025ಕ್ಕೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು: ಸಚಿವ ಪರಮೇಶ್ವರ್ – Yettinahole Project

ತುಮಕೂರು: “ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಸೆ.8ರಂದು ಚಾಲನೆ ನೀಡಲಾಗುತ್ತಿದೆ” ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲಾಧಿಕಾರಿಯವರ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ನೀರಿನ ಯಂತ್ರಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ಸ್ಫೋಟಗೊಂಡಿದ್ದವು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದು ಯಶಸ್ವಿಯಾಗಿದೆ. ವಾಣಿವಿಲಾಸ ಸಾಗರ ಅಣೆಕಟ್ಟೆಗೆ 1,500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದು ಆ ಭಾಗಕ್ಕೆ ಉಪಯೋಗವಾಗಲಿದೆ. ಮುಂದಿನ ವರ್ಷ ಅರಸೀಕೆರೆ, ತಿಪಟೂರು ಭಾಗದಲ್ಲಿನ ಕಾಮಗಾರಿ ಪೂರ್ಣಗೊಳ್ಳಲಿದ್ದು ತುಮಕೂರಿಗೆ ನೀರು ಬರಲಿದೆ” ಎಂದರು.
“ಪರಮಶಿವಯ್ಯನವರು ಹಾಸನ, ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ಮಾಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದಕ್ಕೆ ನೇತ್ರಾವತಿ ತಿರುವು ಎಂದು ಹೆಸರಿಟ್ಟಿದ್ದರು. ಇದಕ್ಕೆ ಮಂಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಯೋಜನೆ ಕೈ ಬಿಡುವ ಪರಿಸ್ಥಿತಿಯೂ ಬಂದಿತ್ತು. ಇದಾದ ಬಳಿಕ ನೀರಾವರಿ ತಜ್ಞರು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುವ ಪ್ರದೇಶವನ್ನು ಗುರುತಿಸಿದರು. ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ, ಕೇದಿಹೊಳೆ ಇದೆಲ್ಲವೂ ಕ್ರೋಢೀಕೃತವಾಗಿ ಒಂದೆಡೆ ಬಂದರೆ 24 ಟಿಎಂಸಿ ನೀರು ಬರುತ್ತದೆ. ಈ ಯೋಜನೆಯ ಸಾಧಕ-ಬಾಧಕಗಳನ್ನು, ನೀರು ತೆಗೆದುಕೊಳ್ಳುವ ಸಾಧ್ಯ-ಅಸಾಧ್ಯತೆಯ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದರು” ಎಂದು ವಿವರಿಸಿದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇದಕ್ಕೆ ಬೇಕಾದ ಹಣಕಾಸು, ತಾಂತ್ರಿಕತೆಯನ್ನು ಅಧ್ಯಯನ ನಡೆಸಿ, ₹12,912.36 ಕೋಟಿ ಹಣವನ್ನು ಬಜೆಟ್ನಲ್ಲಿ ಒದಗಿಸಿ, 17-2-2014ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದರು. ಯೋಜನೆಯ ಇವತ್ತಿನ ಮೊತ್ತ ₹23,251 ಕೋಟಿ ತಲುಪಿದೆ. ಈ ಯೋಜನೆಯು ಮುಂಬರುವ ಮಾರ್ಚ್ 2027ಕ್ಕೆ ಸಂಪೂರ್ಣಗೊಳ್ಳಲಿದೆ” ಎಂದು ಸಚಿವರು ಮಾಹಿತಿ ನೀಡಿದರು.
“ಎತ್ತಿನಹೊಳೆ ಯೋಜನೆಯ 24.01 ಟಿಎಂಸಿ ನೀರಿನಲ್ಲಿ ಜಿಲ್ಲೆಗೆ 5.470 ಟಿಎಂಸಿ ಹಂಚಿಕೆ ಮಾಡಲಾಗಿದೆ. 2.294 ಟಿಎಂಸಿ ಕುಡಿಯುವ ನೀರಿಗೆ, 3.446 ಸಣ್ಣ ನೀರಾವರಿ 113 ಕೆರೆಗಳ ಭರ್ತಿಗೆ ಅವಕಾಶವಿದೆ. ಒಟ್ಟು 3,117 (76 ಗುಂಟೆ) ಎಕರೆ ಜಾಗದಲ್ಲಿ 2022 ಎಕರೆ ಭೂಮಿಗೆ ಹಣ ಮಂಜೂರಾಗಿ ಭೂಸ್ವಾಧೀನವಾಗಿದೆ. ಶೇ 80ರಷ್ಟು ಭೂಸ್ವಾಧೀನಗೊಂಡಿದೆ. 1,200 ಕೋಟಿ ರೂ ಬಿಡುಗಡೆಯಾಗಿದೆ. 2025ಕ್ಕೆ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ನೀರು ಹರಿಯಲಿದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 0.20 ಟಿಎಂಸಿ ಕುಡಿಯುವ ನೀರು ಪೂರೈಕೆಯಾಗಲಿದೆ” ಎಂದರು.
“1,200 ಕೋಟಿ ರೂ.ಗಳಲ್ಲಿ 448 ಕೋಟಿ ಹಂಚಿಕೆಯಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 434 ಕೋಟಿ ಬಾಕಿ ಇದೆ. 397 ಕೋಟಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಂತೆ ಹಂತಹಂತವಾಗಿ ಹಣ ಮಂಜೂರು ಮಾಡಲಾಗುವುದು” ಎಂದು ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 150 ಕಿ.ಮೀ. ಕೆನಾಲ್: “ಜಿಲ್ಲೆಯಲ್ಲಿ ಮುಖ್ಯ ಕೆನಾಲ್ 150 ಕಿ.ಮೀ ಇದೆ. ಇದರಲ್ಲಿ 102 ಕಿ.ಮೀ ಕೆನಾಲ್ ಕಾಮಗಾರಿ ಪೂರ್ಣಗೊಂಡಿದೆ. 121 ಕಿ.ಮೀ ಫೀಡರ್ ಕೆನಾಲ್‌ನಲ್ಲಿ 106 ಕಿ.ಮೀ. ಪೂರ್ಣಗೊಂಡಿದೆ. ಜುಲೈ 2025ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿ ಸುಮಾರು 63 ಎಕರೆ ಅರಣ್ಯ ಭೂಮಿ ಈ ಯೋಜನೆಯಲ್ಲಿ ಬರುತ್ತದೆ” ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ: “ಮೊದಲನೆ ಯೋಜನೆ ಮಾಡಿದಾಗ ಕೊರಟಗೆರೆ ತಾಲೂಕಿನ ಬೈಲಗೊಂಡನಹಳ್ಳಿಯಲ್ಲಿ 2,500 ಸಾವಿರ ಎಕರೆ ಭೂಮಿ ಸೇರಿ ದೊಡ್ಡಬಳ್ಳಾಪುರ ತಾಲೂಕಿಗೆ ಸೇರಿದ 2500 ಭೂಮಿ ಇದೆ. ದೊಡ್ಡಬಳ್ಳಾಪುರ ಜಾಗವು ಅಲ್ಲಿನ ಭೂಮಿಯ ಮೌಲ್ಯಕ್ಕೆ ತೆಗೆದುಕೊಂಡರೆ, ತುಮಕೂರಿನಲ್ಲಿ 12 ಲಕ್ಷ ರೂ. ತೆಗೆದುಕೊಳ್ಳುತ್ತದೆ. ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನನ್ನು ಸಚಿವ ಸಂಪುಟ ಉಪ ಸಮಿತಿ ಸದಸ್ಯನನ್ನಾಗಿ ಮಾಡಲಾಯಿತು. ತದನಂತರ ಬಂದ ಸರ್ಕಾರ ಯೋಜನೆಯನ್ನು ಅಲ್ಲಿಗೆ ಕೈಬಿಟ್ಟರು. ಸದ್ಯ ಬೈಲಗೊಂಡಲಹಳ್ಳಿಯಲ್ಲಿ ಯಾವುದೇ ರಿಸರ್ವ್ ಭೂಮಿ ಇರುವುದಿಲ್ಲ. ಈ ಹಿಂದೆ ಭೂಮಿ ಕೊಡುವುದಾದರೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ರೈತರೊಂದಿಗಿನ ಸಭೆಯಲ್ಲಿ ತಿಳಿಸಿದ್ದೆ. ಇದಕ್ಕೆ ರೈತರು ನಿರಾಕರಿಸಿದ್ದರು” ಎಂದು ಅವರು ಹೇಳಿದ್ದಾರೆ.
ಶೇ.64ರಷ್ಟು ಕೆನಾಲ್ ಕಾಮಗಾರಿ ಪೂರ್ಣ: “ಎತ್ತಿನಹೊಳೆ ಯೋಜನೆಯ ಕೆನಾಲ್ ದಾರಿ ತಿಪಟೂರು 43 .ಕಿ.ಮೀ., ಚಿಕ್ಕನಾಯಕನಹಳ್ಳಿ 12 ಕಿ.ಮೀ, ತುರುವೆಕೆರೆ 1 ಕಿ.ಮೀ, ಗುಬ್ಬಿ 41 ಕಿ.ಮೀ, ತುಮಕೂರು ಗ್ರಾ 31, ಕೊರಟಗೆರೆ 19, ಮಧುಗಿರಿ (ಫೀಡರ್ ಕೆನಾಲ್) 40 ಕಿ.ಮೀ, ಪಾವಘಡ 42 ಕಿ.ಮೀ. ಕೆನಾಲ್ ಹಾದುಹೋಗಲಿದೆ. ಜಿಲ್ಲೆಯಲ್ಲಿ ಶೇ. 64ರಷ್ಟು ಮುಖ್ಯ ಕೆನಾಲ್ ಪೂರ್ಣಗೊಂಡಿದೆ” ಎಂದರು.
ಕೊರಟಗೆರೆ-ತುಮಕೂರು ಎಪಿಎಂಸಿ ಅವ್ಯವಹಾರ: “ಎಪಿಎಂಸಿ ಮಳಿಗೆಗಳನ್ನು ಹಂಚಿಕೆ ಮಾಡಲು ಸರ್ಕಾರ ನಿಯಮಗಳನ್ನು ಮಾಡಿದೆ. ನಿಯಮಗಳ ಪ್ರಕಾರವೇ ಹಂಚಿಕೆ ಮಾಡಲಾಗುವುದು. ನಿಯಮ ಮೀರಿ ಹಂಚಿಕೆ ಮಾಡಿರುವುದು ಕಂಡುಬಂದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಹತ್ತು ವರ್ಷಗಳ ಹಿಂದೆ ಎಪಿಎಂಸಿ ಮಳಿಗೆಗಳು ಹಂಚಿಕೆಯಾಗಿವೆ. ಆಗ ಏನೆಲ್ಲ ನಡೆದಿದೆ ಎಂಬುದನ್ನು ಪರಿಶೀಲಿಸಲಾಗುವುದು” ಎಂದು ತಿಳಿಸಿದರು.
ಹೇಮಾವತಿ: “ಜಿಲ್ಲೆಗೆ 22 ಜುಲೈ 2024 ರಿಂದ 25 ಆಗಸ್ಟ್ 2024ರವರೆ 3,915 ಎಂಸಿಎಫ್‌ಟಿ ನೀರು ಬಂದಿದೆ. ಪ್ರತಿ ದಿನ 1500 ಕ್ಯೂಸೆಕ್ ನೀರು ಬರುತ್ತಿದ್ದು, ಕುಣಿಗಲ್‌ವರೆಗು ಹೋಗುತ್ತಿದೆ. ಬುಗುಡನಹಳ್ಳಿ ಕೆರೆಯಲ್ಲಿ 290 ಎಂಸಿಎಫ್‌ಟಿ ನೀರು ಸಂಗ್ರಹವಿದೆ. ಸಣ್ಣ ನೀರಾವರಿ 27 ಕೆರೆಗಳು ಭರ್ತಿಯಾಗಿವೆ. ಆ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ನೀರು ಬರಲಿದೆ” ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸಿ.ಟಿ.ರವಿಗೆ ತಿರುಗೇಟು: “ನಾವು ಎತ್ತಿನಹೊಳೆ ಯೋಜನೆ ಪೂರ್ಣಗೊಂಡಿದೆ ಎಂದು ಎಲ್ಲಿಯೂ ಹೇಳಿಲ್ಲ. ಯೋಜನೆಯ 1ನೇ ಹಂತ ಕಾಮಗಾರಿ ಪೂರ್ಣಗೊಂಡಿದೆ. ಸಿ.ಟಿ.ರವಿ ಡಬಲ್ ಪದವೀಧರರು. ಅವರನ್ನು ತಪ್ಪಿಸಿ ಮಾಡಲಾಗುವುದಿಲ್ಲ” ಎಂದು ಪರಮೇಶ್ವರ್ ಸಿ.ಟಿ.ರವಿ ಅವರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು
ಅಗಸ್ಟ್ 10 ರಂದು ಬೆಂಗಳೂರು ಮೆಟ್ರೋ ಫೇಸ್-3 ಶಂಕುಸ್ಥಾಪನೆ: ಪ್ರಧಾನಿ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಮತ್ತೊಂದು ಸಿಹಿ ಸುದ್ದಿ. ಬೆಂಗಳೂರು ಮೆಟ್ರೋ ಫೇಸ್-3 ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಕಟಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 10ರಂದು ಪ್ರಧಾನಿ ಮೋದಿ ಮೆಟ್ರೋ ಯೆಲ್ಲೋ ಲೈನ್ ಅನ್ನು ಉದ್ಘಾಟಿಸುವುದರ ಜೊತೆಗೆ ಜೆಪಿ ನಗರ ವೆಗಾಸಿಟಿ ಮಾಲ್‌ನಿಂದ ಕಡಬಗೆರೆವರೆಗೆ ವಿಸ್ತರಿಸಲಾಗಿರುವ ಮೆಟ್ರೋ ಮಾರ್ಗದ ಶಂಕುಸ್ಥಾಪನೆ ಕಾರ್ಯವನ್ನು ಸಹ ನೆರವೇರಿಸಲಿದ್ದಾರೆ,” ಎಂದು ಹೇಳಿದರು.
ಈ ಯೋಜನೆಯು ಸುಮಾರು ₹17,000 ಕೋಟಿ ವೆಚ್ಚದ ಫೇಸ್-3 ಯೋಜನೆಯ ಭಾಗವಾಗಿದೆ. ಮೊದಲೇ ಯೆಲ್ಲೋ ಲೈನ್ ಶಂಕುಸ್ಥಾಪನೆಗೆ ಮೋದಿ ಅವರೇ ಆಗಿದ್ದರೆ, ಈಗ ಉದ್ಘಾಟನೆಯ ಗೌರವವೂ ಅವರಿಗೇ ಸಲ್ಲಲಿದೆ.
ಡಿಸಿಎಂ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ:
ಡಿಸಿಎಂ ಡಿ.ಕೆ. ಶಿವಕುಮಾರ್ ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾತ್ರವಿದೆ ಎಂದು ಹೇಳಿರುವುದರ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸುತ್ತಾ, “ಇದುವರೆಗೆ ಈ ಯೋಜನೆಯ ಬಗ್ಗೆ ಯಾವ ರಾಜ್ಯ ಸಚಿವರೂ ಚಿಂತೆ ಮಾಡಿಲ್ಲ. ಪ್ರಧಾನಿ ಬರುವ ಸುದ್ದಿ ತಿಳಿಯುತ್ತಿದ್ದಂತೆ ಕ್ರೆಡಿಟ್ ಕಳಿಸಲು ಮುಂದಾಗಿದ್ದಾರೆ,” ಎಂದು ಟೀಕಿಸಿದರು.
ಫ್ಲೈಓವರ್ ಪ್ರಗತಿಯ ಮೇಲೂ ಟೀಕೆ:
“ಈಜಿಪುರದ 2.5 ಕಿ.ಮೀ ಫ್ಲೈಓವರ್‌ನ್ನು ಎಂಟು ವರ್ಷಗಳಿಂದ ಪೂರ್ಣಗೊಳಿಸಲಾಗಿಲ್ಲ. ಅದರೆ ಇದೀಗ 100 ಕಿ.ಮೀ ರಸ್ತೆಗಳ ಯೋಜನೆ ಪ್ರಾರಂಭಿಸಿದ್ದಾರೆ,” ಎಂದು ಹೇಳಿದ್ದಾರೆ.
ಮೆಟ್ರೋ ಯೋಜನೆಗೆ ಹಿಂದೆ ಸರ್ಕಾರದ ಕೊಡುಗೆ:
ಕೊರೋನಾ ಸಮಯದಲ್ಲೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳು ಅನುದಾನ ಒದಗಿಸಿ ಕೆಲಸ ಮುಂದುವರೆದಿದ್ದವು. ಆದರೆ ಇದೀಗ ಎಂಡಿ ನೇಮಕ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಅಪರಾಧ
Breaking News ಚಾಲಕ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಸಂಸದ ಡಾ. ಸುಧಾಕರ್ ಹೆಸರು ಉಲ್ಲೇಖ!

ಚಿಕ್ಕಬಳ್ಳಾಪುರ, ಆಗಸ್ಟ್ 7 – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೈನಂದಿನ ಶಾಂತಿಯನ್ನು ಬೆಚ್ಚಿಬೀಳಿಸುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಜಿಲ್ಲಾ ಪಂಚಾಯತ್ ಕಚೇರಿಯ ಆವರಣದಲ್ಲಿ 33 ವರ್ಷದ ಗುತ್ತಿಗೆ ಚಾಲಕ ಬಾಬು ಎಂ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೋಕಾಂತರವಾಗಿದೆ.
ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಹೆಸರು:
8 ವರ್ಷಗಳಿಂದ ಲೆಕ್ಕಪರಿಶೋಧನೆ ವಿಭಾಗದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಬಾಬು, ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಹಾಗೂ ಅವರ ಬೆಂಬಲಿಗರಾದ ನಾಗೇಶ್ ಮತ್ತು ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವೆನಿಸಿದ ಹಣಕಾಸು ವಂಚನೆ:
ಬಾಬು ಅವರು ಡೆತ್ ನೋಟ್‌ನಲ್ಲಿ, ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಬಾಬು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಕಚೇರಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು:
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ FIR ದಾಖಲಾತಿ ನಡೆಯುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು
ಬೆಂಗಳೂರಿನಲ್ಲಿ ವಸತಿ ಯೋಜನೆಗಳ ಅವ್ಯವಸ್ಥೆ: ಹೊಸ ಯೋಜನೆಗಳ ಬಗ್ಗೆ ಶಾಸಕ ಎಸ್.ಟಿ. ಸೋಮಶೇಖರ್ ಅಸಮಾಧಾನ

ಬೆಂಗಳೂರು, ಆಗಸ್ಟ್ 7 – ನಗರದಲ್ಲಿ ಈಗಿನ ವಸತಿ ಯೋಜನೆಗಳು ಪೂರ್ಣವಾಗಿಲ್ಲದಿರುವಾಗ ಹೊಸ ಭೂಸ್ವಾಧೀನ ಅಧಿಸೂಚನೆಗಳನ್ನು ನೀಡುವುದು ಅರ್ಥವಿಲ್ಲ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಕಿಡಿಕಾರಿದರು.
ಯಶವಂತಪುರ ಕ್ಷೇತ್ರದ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ಬರಾಯನಪಾಳ್ಯ ಎ ಹಾಗೂ ಬಿ ಗ್ರಾಮಗಳಲ್ಲಿ ಹೊಸ ಅಂಗನವಾಡಿ ಕಟ್ಟಡ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಲೋಕಾರ್ಪಣೆ ವೇಳೆ ಅವರು ಮಾತನಾಡಿದರು.
ಅವರು ಅಭಿಪ್ರಾಯಪಟ್ಟ ಪ್ರಮುಖ ವಿಷಯಗಳು:
- ಬೆಂಗಳೂರಿನ ಜನಸಂಖ್ಯೆ ಈಗಾಗಲೇ 1.5 ಕೋಟಿಗೂ ಮೀರುತ್ತಿದೆ.
- ವಸತಿ ಸಮುಚ್ಛಯಗಳಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಬಾಕಿಯಿವೆ.
- ಕುಡಿಯುವ ನೀರಿನ ಕೊರತೆ, ಒಳಚರಂಡಿ ಸಮಸ್ಯೆ, ರಾಜಕಾಲುವೆಗಳ ಉಕ್ಕಿಹರಿವು ನಗರದ ಮುಖ್ಯ ಸಮಸ್ಯೆಗಳಾಗಿವೆ.
- ಕೆಲ ಕಟ್ಟಡಗಳು ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿದ್ದು, ಸೋರಿಕೆ ಸಮಸ್ಯೆ ಜನರನ್ನು ಕಾಡುತ್ತಿದೆ.
- “ಕಟ್ಟಡ ಕುಸಿದು ಅನಾಹುತವಾದರೆ ಹೊಣೆ ಯಾರು?” ಎಂದು ಅವರು ಪ್ರಶ್ನಿಸಿದರು.
ಬೇರೆ ಪ್ರಮುಖ ಅಂಶಗಳು:
ನಗರದ ವಾಹನ ಸಂಚಾರ ದಟ್ಟಣೆ, ನಿಯಂತ್ರಣ ತಪ್ಪಿದ ನಗರ ವಿಸ್ತರಣೆ, ಮೂಲಸೌಕರ್ಯದ ಕೊರತೆ ಇವುಗಳಿಂದ ನಾಗರಿಕರು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಹೊರಗೆ ಹೊಸ ವಸತಿ ಯೋಜನೆಗಳನ್ನು ರೂಪಿಸಿ ಮೂಲಸೌಕರ್ಯ ಒದಗಿಸಿದರೆ ಜನಸಂದಣಿ ನಿಯಂತ್ರಣ ಸಾಧ್ಯವೆಂದು ಶಾಸಕ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಾಜರಿದ್ದವರು:
ಪಂಚಾಯತ್ ಅಧ್ಯಕ್ಷೆ ಹೇಮಾ ನಾರಾಯಣ್, ಸದಸ್ಯರು ಸದಾನಂದ.ಡಿ, ಎನ್.ಕುಮಾರ್, ರೇವಣಸಿದ್ದಯ್ಯ, ಅಶ್ವತ್, ವೆಂಕಟಾಚಲ, ಸುನಿಲ್, ಪುಟ್ಟಮಲ್ಲು, ತಾತಪ್ಪ, ಶಿವಣ್ಣ, ಹನುಮಂತ ಹಾಗೂ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು9 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ