Connect with us

ಬೆಂಗಳೂರು

Bengaluru Cloudnine ಸೇರಿ ಹಲವು ಆಸ್ಪತ್ರೆಗಳಿಗೆ ಭಾರೀ ದಂಡ! KPME ಉಲ್ಲಂಘನೆಗೆ ಬೆಂಗಳೂರು ಜಿಲ್ಲಾಡಳಿತದ ಕ್ರಮ

Published

on

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ (KPME) ನಿಯಮಗಳನ್ನು ಉಲ್ಲಂಘಿಸಿರುವ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ KPME ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ, ಜಿಲ್ಲಾಧಿಕಾರಿ ಕಾಂತರಾಜು ಅವರು ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳ ವಿಚಾರಣೆ ನಡೆಸಿ ದಂಡ ಹಾಗೂ ಇತರ ಕ್ರಮಗಳಿಗೆ ಆದೇಶಿಸಿದ್ದಾರೆ.

ನಿಯಮ ಉಲ್ಲಂಘನೆ ಗಂಭೀರವಾಗಿದ್ದ ಮೂರು ವೈದ್ಯಕೀಯ ಸಂಸ್ಥೆಗಳ KPME ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಟಿ.ದಾಸರಹಳ್ಳಿಯ ಶ್ರೀ ಅಯ್ಯಪ್ಪ ಟೆಂಪಲ್ ಮೆಡಿಕಲ್ ಸೆಂಟರ್‌ಗೆ ₹50,000, ಜಿಗಣಿಯ ಶ್ರೀ ಪದ್ಮಗಿರಿ ಕ್ಲಿನಿಕ್‌ಗೆ ₹1 ಲಕ್ಷ ಹಾಗೂ ಬಿ.ಜಿ. ರಸ್ತೆಯ ಶ್ರೀ ಹರ್ಷವರ್ಧನ್ ಆಸ್ಪತ್ರೆಗೆ ₹20,000 ದಂಡ ವಿಧಿಸಿ ಪರವಾನಗಿ ರದ್ದುಗೊಳಿಸಲಾಗಿದೆ.

ಹಲವು ಆಸ್ಪತ್ರೆಗಳಿಗೆ ದಂಡ

KPME ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತಷ್ಟು ವೈದ್ಯಕೀಯ ಸಂಸ್ಥೆಗಳಿಗೂ ಜಿಲ್ಲಾಡಳಿತ ದಂಡ ವಿಧಿಸಿದೆ. ಎಚ್‌ಎಎಲ್ ರಸ್ತೆಯ Cloudnine Hospital ಆಸ್ಪತ್ರೆಗೆ ₹50,000, ಹುಲ್ಲಹಳ್ಳಿಯ ಆರ್.ವಿ. ಕ್ಲಿನಿಕ್‌ಗೆ ₹1 ಲಕ್ಷ, ಮುನೇಶ್ವರ ಲೇಔಟ್‌ನ ಇಕ್ಷಾ ಕ್ಲಿನಿಕ್‌ಗೆ ₹10,000 ಹಾಗೂ ರಾಜಾಜಿನಗರದ ಎನ್‌ಯು ಹಾಸ್ಪಿಟಲ್ಸ್‌ಗೆ ₹10,000 ದಂಡ ವಿಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ನ್ಯೂನತೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ಮುಚ್ಚಳಿಕೆ ಪತ್ರವನ್ನೂ ಪಡೆಯಲಾಗಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮದಿನಿ ಸೇರಿದಂತೆ ಹಲವು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು KPME ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಸಂದೇಶ ನೀಡಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru ಟ್ರಾಫಿಕ್‌ಗೆ ಬಿಗ್ ರಿಲೀಫ್: 28 ಕಿ.ಮೀ ಎಲಿವೇಟೆಡ್ ಕಾರಿಡಾರ್, 90 ನಿಮಿಷದ ಪ್ರಯಾಣ 30 ನಿಮಿಷಕ್ಕೆ!

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನ(Bengaluru) ಸಂಚಾರ ದಟ್ಟಣೆಗೆ ಪರಿಹಾರ ನೀಡಲು ನಗರದ ಅತಿದೊಡ್ಡ ಎಲಿವೇಟೆಡ್ ಕಾರಿಡಾರ್(Elevated Corridor) ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ತುಮಕೂರು ರಸ್ತೆ(Tumakuru Road)ಯಿಂದ ಹಳೇ ಮದ್ರಾಸ್ ರಸ್ತೆ(Old Madras Road)ಯನ್ನು ಸಂಪರ್ಕಿಸುವ ಸುಮಾರು 28 ಕಿ.ಮೀ ಉದ್ದದ ಶುಲ್ಕ ಸಹಿತ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಮುಂದಾಗಿದೆ.

ಸುಮಾರು ₹3,500 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ-ಖಾಸಗಿ ಸಹಭಾಗಿತ್ವದ(PPP) ಮೂಲಕ BOOT ಮಾದರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಯೋಜನಾ ವೆಚ್ಚದ ಶೇ.40ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಳಿದ ಶೇ.60ರಷ್ಟು ಮೊತ್ತವನ್ನು ಗುತ್ತಿಗೆದಾರ ಸಂಸ್ಥೆ ಹೂಡಿಕೆ ಮಾಡಲಿದೆ.

30 ವರ್ಷ ಟೋಲ್ ಸಂಗ್ರಹಕ್ಕೆ ಅವಕಾಶ

ಕಾರಿಡಾರ್ ನಿರ್ಮಾಣ ಪೂರ್ಣಗೊಂಡ ಬಳಿಕ ಗುತ್ತಿಗೆದಾರ ಸಂಸ್ಥೆಗೆ 30 ವರ್ಷಗಳ ಕಾಲ ವಾಹನಗಳಿಂದ ಬಳಕೆದಾರರ ಶುಲ್ಕ ಸಂಗ್ರಹಿಸಲು ಅವಕಾಶ ನೀಡಲಾಗುತ್ತದೆ. ಆದರೆ, ವಾಹನಗಳಿಗೆ ವಿಧಿಸುವ ಶುಲ್ಕದ ಪ್ರಮಾಣವನ್ನು ಸರ್ಕಾರವೇ ಅಂತಿಮಗೊಳಿಸಲಿದೆ.

30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ

ಯೋಜನೆಯ ಪ್ರಕಾರ ಕಾಮಗಾರಿಯನ್ನು 30 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯಶವಂತಪುರ ಫ್ಲೈಓವರ್ ಬಳಿಯಿಂದ ಆರಂಭವಾಗುವ ನಾಲ್ಕು ಪಥಗಳ ಕಾರಿಡಾರ್‌ನಲ್ಲಿ ಒಟ್ಟು 12 ಕಡೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಲಿದೆ. ಕಾರಿಡಾರ್‌ನಲ್ಲಿ ವಾಹನಗಳು ಗರಿಷ್ಠ 60ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗುತ್ತದೆ.

90 ನಿಮಿಷದ ಪ್ರಯಾಣ ಕೇವಲ 30 ನಿಮಿಷಕ್ಕೆ?

ಪ್ರಸ್ತುತ ಯಶವಂತಪುರದಿಂದ ಕೆ.ಆರ್.ಪುರ ಸಿಗ್ನಲ್ ಬಳಿಯ ಹೂವಿನ ಮಾರುಕಟ್ಟೆ ಪ್ರದೇಶಕ್ಕೆ ಪೀಕ್ ಅವಧಿಯಲ್ಲಿ ಸುಮಾರು 90 ನಿಮಿಷಗಳವರೆಗೆ ಪ್ರಯಾಣ ಸಮಯ ಬೇಕಾಗುತ್ತದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾದರೆ ಇದೇ ಪ್ರಯಾಣವನ್ನು ಸುಮಾರು 28ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆ ಇದೆ.

ಯಾವ ಮಾರ್ಗದಲ್ಲಿ ಎಲಿವೇಟೆಡ್ ಕಾರಿಡಾರ್?

ಯಶವಂತಪುರ ಫ್ಲೈಓವರ್ ಸರ್ಕಲ್‌ನಿಂದ ಆರಂಭವಾಗುವ ಕಾರಿಡಾರ್ ಐಐಎಸ್ಸಿ, ಮೇಕ್ರಿ ಸರ್ಕಲ್, ಜಯಮಹಲ್, ಸೇಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಹಲಸೂರು ಕೆರೆ ಮಾರ್ಗವಾಗಿ ಸಾಗಲಿದೆ. ಬಳಿಕ ಹಳೇ ಮದ್ರಾಸ್ ರಸ್ತೆಯನ್ನು ಸಂಪರ್ಕಿಸಿ ಕೆ.ಆರ್.ಪುರ ಸಿಗ್ನಲ್ ನಂತರ ಮುಕ್ತಾಯಗೊಳ್ಳಲಿದೆ.

ಎಲಿವೇಟೆಡ್ ಕಾರಿಡಾರ್ ಬಳಸಲು ಇಚ್ಛಿಸದ ವಾಹನ ಸವಾರರಿಗೆ ಈಗಿರುವ ಸಾಮಾನ್ಯ ರಸ್ತೆಗಳು ಎಂದಿನಂತೆ ಲಭ್ಯವಿರಲಿವೆ. ಹೀಗಾಗಿ ಯೋಜನೆ ಜಾರಿಯಾದರೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರದ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ.

Continue Reading

ಬೆಂಗಳೂರು

Varamahalakshmi ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ! K R Market ನಲ್ಲಿ ಭಾರೀ ಜನಜಂಗುಳಿ

Published

on

ಬೆಂಗಳೂರು: ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ (Varamahalakshmi) ಆಚರಣೆಗೆ ಕೇವಲ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ (Bengaluru) ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್ ಸೇರಿದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ದಿಢೀರ್ ಹೆಚ್ಚಾಗಿರುವುದರಿಂದ ಹೂವು ಮತ್ತು ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಪೂಜೆ ಹಾಗೂ ಅಲಂಕಾರಕ್ಕೆ ಅಗತ್ಯವಾದ ಕೆಲವು ಹೂವುಗಳ ದರ ಶೇ.100ರಿಂದ 200ರಷ್ಟು ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಹೂವುಗಳ ಬೆಲೆ ಎಷ್ಟು?

ಕೆ.ಆರ್. ಮಾರುಕಟ್ಟೆಯಲ್ಲಿ ಕನಕಾಂಬರ ಹೂವಿನ ಬೆಲೆ ಕೆಜಿಗೆ ಸುಮಾರು ₹2,000ರಿಂದ ₹5,000-₹6,000 ವರೆಗೆ ಏರಿಕೆಯಾಗಿದೆ. ಮಲ್ಲಿಗೆ ಕೆಜಿಗೆ ₹1,000ರಿಂದ ₹2,000, ಸೇವಂತಿಗೆ ₹150ರಿಂದ ₹450 ಹಾಗೂ ಗುಲಾಬಿ ಸುಮಾರು ₹400 ದರದಲ್ಲಿ ಮಾರಾಟವಾಗುತ್ತಿದೆ.

ಇನ್ನು ವರಮಹಾಲಕ್ಷ್ಮಿ ಪೂಜೆಗೆ ಹೆಚ್ಚಿನ ಬೇಡಿಕೆಯಿರುವ ತಾವರೆ ಹೂವಿನ ಒಂದು ಜೋಡಿ ₹100 ವರೆಗೆ ಮಾರಾಟವಾಗುತ್ತಿದೆ.

ಹಣ್ಣುಗಳಿಗೂ ದುಬಾರಿ ಶಾಕ್

ಪೂಜೆ ಮತ್ತು ನೈವೇದ್ಯಕ್ಕೆ ಬಳಸುವ ಹಣ್ಣುಗಳ ದರದಲ್ಲೂ ಗಣನೀಯ ಏರಿಕೆಯಾಗಿದೆ. ಸೇಬು ಕೆಜಿಗೆ ₹110ರಿಂದ ₹270, ದಾಳಿಂಬೆ ₹120ರಿಂದ ₹260, ಕಿತ್ತಳೆ ₹80ರಿಂದ ₹180, ಮೂಸಂಬಿ ₹100ರಿಂದ ₹150 ಹಾಗೂ ಎಲಕ್ಕಿ ಬಾಳೆಹಣ್ಣು ₹50ರಿಂದ ₹100 ವರೆಗೆ ಮಾರಾಟವಾಗುತ್ತಿದೆ.

ಬೆಲೆ ಹೆಚ್ಚಿದರೂ ಖರೀದಿ ಭರ್ಜರಿ

ಹೂವು, ಹಣ್ಣು ಮತ್ತು ಇತರೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದರೂ ವರಮಹಾಲಕ್ಷ್ಮಿ ಹಬ್ಬದ ಉತ್ಸಾಹಕ್ಕೆ ಯಾವುದೇ ಕೊರತೆ ಕಂಡುಬಂದಿಲ್ಲ. ದುಬಾರಿ ದರದ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.

ವಿಶೇಷವಾಗಿ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಭಾರಿ ಜನಸಂದಣಿ ಕಂಡುಬಂದಿದ್ದು, ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೂವು ಮತ್ತು ಹಣ್ಣುಗಳ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Continue Reading

ಬೆಂಗಳೂರು

GBA ಮೇಲೆ ನಂಬಿಕೆ ಇಲ್ಲವೇ? ರಸ್ತೆ ಕಾಮಗಾರಿ ವಿಳಂಬ ಭೀತಿಯಿಂದ WFH ತಿರಸ್ಕರಿಸಿದ ಕಂಪನಿಗಳು

Published

on

ಬೆಂಗಳೂರು: ನಗರದ ಔಟರ್ ರಿಂಗ್‌ರೋಡ್ (Outer Ring Road) ವ್ಯಾಪ್ತಿಯಲ್ಲಿ ನಡೆಯಲಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು 50:50 ಅನುಪಾತದಲ್ಲಿ ವರ್ಕ್ ಫ್ರಮ್ ಹೋಂ (Work From Home) ಜಾರಿಗೆ ತರಬೇಕೆಂಬ ಜಿಬಿಎ (GBA) ಮನವಿಗೆ ಐಟಿ ಸಂಸ್ಥೆಗಳು ಒಪ್ಪಿಗೆ ನೀಡಿಲ್ಲ. ಸದ್ಯ ವರ್ಕ್ ಫ್ರಮ್ ಹೋಂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಕಂಪನಿಗಳ ಅಸೋಸಿಯೇಷನ್ ಬಂದಿದೆ.

ಔಟರ್ ರಿಂಗ್‌ರೋಡ್‌ನ ಸುಮಾರು 20 ಕಿಲೋಮೀಟರ್ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಇದೇ ಅಕ್ಟೋಬರ್‌ನಿಂದ ಆರಂಭಿಸಲು ಜಿಬಿಎ ಸಿದ್ಧತೆ ನಡೆಸಿದೆ. ಕಾಮಗಾರಿ ವೇಗವಾಗಿ ಪೂರ್ಣಗೊಳಿಸುವ ಹಾಗೂ ಈ ಭಾಗದ ಟ್ರಾಫಿಕ್ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಶೇಕಡಾ 50ರಷ್ಟು ವರ್ಕ್ ಫ್ರಮ್ ಹೋಂ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು.

ಆದರೆ ಕಂಪನಿಗಳ ಮುಖ್ಯಸ್ಥರು ಮತ್ತು ಅಸೋಸಿಯೇಷನ್ ಸಭೆಯಲ್ಲಿ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ವರ್ಕ್ ಫ್ರಮ್ ಹೋಂ ಜಾರಿಯಿಂದ ಸಂಸ್ಥೆಗಳ ಕಾರ್ಯಕ್ಷಮತೆ ಮತ್ತು ಕೆಲಸದ ವೇಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

GBA ಮೇಲೆ ಕಂಪನಿಗಳಿಗೆ ನಂಬಿಕೆ ಇಲ್ಲವೇ?

ಜಿಬಿಎ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಕಂಪನಿಗಳಿಗೆ ಅನುಮಾನವಿದೆ ಎನ್ನಲಾಗಿದೆ. ಹಿಂದೆ ಹಲವು ಯೋಜನೆಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ, ORR ವೈಟ್ ಟ್ಯಾಪಿಂಗ್ ಕಾಮಗಾರಿಯೂ ನಿಗದಿತ ಅವಧಿಯಲ್ಲಿ ಮುಗಿಯದಿದ್ದರೆ ದೀರ್ಘಕಾಲ ವರ್ಕ್ ಫ್ರಮ್ ಹೋಂ ಮುಂದುವರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ಮಾರ್ಗದಲ್ಲಿ ಈಗಾಗಲೇ ಮೆಟ್ರೋ ಕಾಮಗಾರಿಯೂ ನಡೆಯುತ್ತಿರುವುದರಿಂದ ವಾಹನ ಸಂಚಾರ ಹಾಗೂ ಉದ್ಯೋಗಿಗಳ ಓಡಾಟಕ್ಕೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ. ಹೀಗಾಗಿ ನವೆಂಬರ್ ನಂತರ ಕಾಮಗಾರಿ ಆರಂಭಿಸುವುದು, ಮೊದಲು ಸರ್ವೀಸ್ ರಸ್ತೆಗಳನ್ನು ಸುಗಮಗೊಳಿಸುವುದು ಮತ್ತು ಹಂತ ಹಂತವಾಗಿ ರಸ್ತೆ ಕಾಮಗಾರಿ ಕೈಗೊಳ್ಳುವುದು ಸೂಕ್ತ ಎಂಬ ಸಲಹೆಯನ್ನು ಅಸೋಸಿಯೇಷನ್ ನೀಡಿದೆ.

ಜಿಬಿಎ ಜೊತೆ ಮುಂದಿನ ಸಭೆಯಲ್ಲಿ ಈ ವಿಚಾರಗಳನ್ನು ಚರ್ಚಿಸಿ ಪರ್ಯಾಯ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಕಂಪನಿಗಳ ಅಸೋಸಿಯೇಷನ್ ಮುಂದಾಗಿದೆ.

Continue Reading

Trending